ಉಡುಪಿ: ನವದೆಹಲಿ ವಸಂತಕುಂಜ್ನಲ್ಲಿರುವ ಶ್ರೀ ಪೇಜಾವರ ಮಠದ ಶಾಖೆಯಲ್ಲಿ ವಿಜಯದಶಮೀ ಪ್ರಯುಕ್ತ ಲೋಕಕಲ್ಯಾಣಾರ್ಥ ಚಂಡಿಕಾ ಯಾಗ ಬುಧವಾರ ವೈಭವದಿಂದ ನೆರವೇರಿತು.
ಮುಖ್ಯಮಂತ್ರಿ ರೇಖಾ ಗುಪ್ತಾ ಪೇಜಾವರ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರಿಂದ ಅನುಗ್ರಹ ಪ್ರಸಾದ ಸ್ವೀಕರಿಸಿದರು. ರೇಖಾ ದಂಪತಿ ಹೆಸರಿನಲ್ಲಿ ಯಾಗದ ಸಂಕಲ್ಪ ನೆರವೇರಿಸಲಾಯಿತು.
ಯಜ್ಞದಿಂದ ಲೋಕ ಕ್ಷೇಮವಾಗಲಿ. ದೆಹಲಿ ಅಭಿವೃದ್ಧಿಗಾಗಿ ರೇಖಾ ಗುಪ್ತಾ ನೇತೃತ್ವದ ಸರ್ಕಾರ ಕೈಗೊಳ್ಳುತ್ತಿರುವ ಎಲ್ಲ ಕಾರ್ಯಗಳೂ ಯಶಸ್ವಿಯಾಗಲಿ.
ವಿಶೇಷವಾಗಿ ಯಮುನಾ ನದಿಯನ್ನು ವಿಷಮುಕ್ತಗೊಳಿಸುವ ಕಾರ್ಯ ಅತ್ಯಂತ ಶ್ಲಾಘನೀಯ. ಈ ಕಾರ್ಯದಲ್ಲಿ ಸರ್ಕಾರದ ಜೊತೆ ಸಮಸ್ತ ದೆಹಲಿ ಜನತೆ ಕೈಜೋಡಿಸಿ ಯಶಸ್ವಿಗೊಳಿಸುವಂತಾಗಬೇಕು ಎಂದು ಶ್ರೀಗಳು ಹಾರೈಸಿದರು. ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ. ವಿಠೋಬಾಚಾರ್ಯ, ಶ್ರೀಗಳ ಆಪ್ತ ಕೃಷ್ಣ್ಣಮೂರ್ತಿ ಭಟ್, ಆಡಳಿತ ಮಂಡಳಿಯ ಅರವಿಂದ್ ಮೊದಲಾದವರಿದ್ದರು.