ಉಡುಪಿ: ಸಿದ್ದರಾಮಯ್ಯ ಮುಂದಿನ ಎರಡುವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದಿದ್ದಾರೆ. ಅಧಿಕಾರವನ್ನು ಕಾಲಿನಿಂದ ಒದ್ದು ತೆಗೆದುಕೊಳ್ಳುತ್ತೇನೆ ಎಂದಿರುವ ಡಿಕೆ ಶಿವಕುಮಾರ್ ಮಾತು ನನಗೆ ನೆನಪಿದೆ. ಈ ಡೊಂಬರಾಟ ನೋಡಿ ಸಾಕಾಗಿದೆ. ಹೀಗಾಗಿ ಬಿಜೆಪಿ ಚುನಾವಣೆಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿ, ಕಂಪನ ಕಾಂಗ್ರೆಸ್ ನ ಒಳಗೆ ಆಗಲಿ. ಆದರೆ ರಾಜ್ಯದ ಜನತೆಗೆ ತೊಂದರೆ ಆಗದಿರಲಿ ಎಂಬುದು ನಮ್ಮ ಆಶಯ. ಈ ಕಂಪನದಲ್ಲಿ ಬಿಜೆಪಿಯ ಪಾತ್ರವಿಲ್ಲ. ಈ ಸರ್ಕಾರ ಶೀಘ್ರವಾಗಿ ಪತನವಾಗಬೇಕು. ಚುನಾವಣೆಗೆ ಹೋಗಬೇಕು. ಮುಂದಿನ ನವರಾತ್ರಿಯಲ್ಲಿ ಚಾಮುಂಡೇಶ್ವರಿಗೆ ನಾವೇ ಪುಷ್ಪಾರ್ಚನೆ ಮಾಡಬೇಕು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ಶೇ. 80 ಸರ್ಕಾರ
ರಾಜ್ಯದಲ್ಲಿ ಹೊಸ ರಸ್ತೆಗಳನ್ನು ನಾವು ಕೇಳುತ್ತಿಲ್ಲ. ಈಗಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಸರ್ಕಾರ ಅನುದಾನ ಕೊಡುತ್ತಿಲ್ಲ. 80% ಸರ್ಕಾರದಿಂದ ಅಭಿವೃದ್ಧಿ ನಿಂತುಹೋಗಿದೆ. ಸಾವಿಲ್ಲದ ಮನೆಯಿಂದ ಸಾಸಿವೆ ತಾ ಅನ್ನುವ ಗಾದೆ ಮಾತಿದೆ. ಆದರೆ ಇಂದು ರಾಜ್ಯದಲ್ಲಿ ಗುಂಡಿ ಇಲ್ಲದ ರಸ್ತೆಗಳನ್ನು ತೋರಿಸಿ ಎಂಬಂತಾಗಿದೆ. ಮುಂದೆ ಬಿಜೆಪಿ ಸರ್ಕಾರ ಬಂದ ಮೇಲೆ ಗುಂಡಿ ಮುಚ್ಚಬೇಕಾಗಿದೆ ಎಂದರು.
ರಾಹುಲ್ ದೇಶಕ್ಕೆ ನಿಷ್ಠರಾಗಿಲ್ಲ
ಕೊಲಂಬಿಯಾದಲ್ಲಿ ರಾಹುಲ್ ಗಾಂಧಿ ಹೇಳಿಕೆ ಗಾಂಧಿ ಕುಟುಂಬ ಯಾವತ್ತು ಈ ದೇಶಕ್ಕೆ ನಿಷ್ಟರಾಗಿ ಇರಲಿಲ್ಲ ಎಂಬುದನ್ನು ತೋರಿಸುತ್ತದೆ. ವಿದೇಶಕ್ಕೆ ಹೋದಾಗ ಭಾರತವನ್ನು ಟೀಕೆ ಮಾಡುವುದು. ವ್ಯವಸ್ಥೆಯನ್ನು ಟೀಕೆ ಮಾಡುವುದು ಮುಂದುವರಿಸಿದ್ದಾರೆ. ಮೊದಲು ದೇಶದ ಬಗ್ಗೆ ನಿಷೆ್ಠೆಯನ್ನು ತೋರಿಸಬೇಕು. ಇಂಥ ನಡವಳಿಕೆ ನಾಯಕತ್ವವನ್ನು ರೂಪಿಸುವುದಿಲ್ಲ. ಮನೆಯಲ್ಲಿ ಸಿಕ್ಕಿದ ಸಂಸ್ಕಾರದಿಂದ ವಿದೇಶದಲ್ಲಿ ಈ ರೀತಿಯ ಮಾತನಾಡಿದ್ದಾರೆ ಎಂದರು.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಸರ್ಕಾರ ಪರೋಕ್ಷವಾಗಿ ಮನ್ನಣೆ ಕೊಡುತ್ತಿದೆ. ಈ ಬಗ್ಗೆ ಗುಮಾನಿಗಳಿವೆ. ತನಿಖೆ ಬೇಗ ಮುಗಿಸಿ ಮಧ್ಯಂತರ ವರದಿ ಕೊಡಿ ಎಂದರೆ ಸರ್ಕಾರ ಕೇಳುತ್ತಿಲ್ಲ. ಅಪಪ್ರಚಾರ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುವ ದಿಟ್ಟತನ ತೋರಿಸಬೇಕು ಎಂದು ಆಗ್ರಹಿಸಿದರು.