ಉಡುಪಿ: ಅನೇಕ ದಶಕಗಳಿಂದ ನಿಸ್ವಾರ್ಥವಾಗಿ ಪಕ್ಷ$ವನ್ನು ಬೆಳೆಸಿದ ಹಿರಿಯರ ಪುಣ್ಯದ ಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಈ ಪುಣ್ಯದ ಗಡಿಗೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ಗುಂಡಿಬೈಲಿನಲ್ಲಿ ಬಿಜೆಪಿ ಜಿಲ್ಲಾ ಕಚೇರಿ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ, ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
18 ತಿಂಗಳೊಳಗೆ ಕಾರ್ಯಾರಂಭ
ದೇಶಾದ್ಯಂತ 700 ಸರ್ಕಾರಿ ಜಿಲ್ಲೆಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣಗೊಂಡಿದೆ. ಇನ್ನೂ 250 ಸಂಟನಾತ್ಮಕ ಜಿಲ್ಲೆಗಳಲ್ಲಿ ಸ್ವಂತ ಕಾರ್ಯಾಲಯ ನಿರ್ಮಾಣ ಬಾಕಿ ಇದೆ. ಉಡುಪಿ ಕಚೇರಿ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮುಂದಿನ ಚುನಾವಣೆ ಹೊಸ ಕಚೇರಿಯಿಂದಲೇ ನಿರ್ವಹಣೆ ಸಂಕಲ್ಪ ನಮ್ಮದಾಗಿದೆ. ಇದಕ್ಕೆ ಪ್ರತಿ ಬೂತ್ ಸಮಿತಿ ಕಾರ್ಯಕರ್ತರ ಸಹಭಾಗಿತ್ವವೂ ಅಗತ್ಯವಾಗಿದೆ ಎಂದರು.
ಧರ್ಮಸ್ಥಳ ಮೇಲೆ ವೈಚಾರಿಕ ಆಕ್ರಮಣ
ಧರ್ಮಸ್ಥಳ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ. ಮೂರು ವರ್ಷದ ಹಿಂದೆ ಉಡುಪಿ ಕೃಷ್ಣಮಠದ ಮೇಲು ಆಕ್ರಮಣ ನಡೆದಿತ್ತು. ಸ್ವಲ್ಪ ದಿನದಲ್ಲಿ ಮೂಡುಬಿದರೆ ಮೇಲೆ ಆಕ್ರಮಣ ನಡೆಯುತ್ತದೆ. ಹುಲಿಗೆ ರಕ್ತದ ರುಚಿ ಸಿಕ್ಕಿದಂತೆ ಶಬರಿಮಲೆ, ಈಶ ಆಶ್ರಮ, ಶನಿ ಸಿಂಗ್ಲಾಪುರ ಬಳಿಕ ಧರ್ಮಸ್ಥಳದಲ್ಲಿ ರಕ್ತದ ರುಚಿ ನೋಡುವ ಕೆಲಸ ಮಾಡುತ್ತಿದ್ದಾರೆ. ಅಪಪ್ರಚಾರಕ್ಕೂ ಶಾಸ್ತಿ ಆಗಬೇಕು. ಹಿಂದುಗಳ ಶ್ರದ್ದೆಯ ವಿಚಾರ ಮತ್ತು ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಗೋವು, ಕುಟುಂಬ ವ್ಯವಸ್ಥೆ, ಮೌಲ್ಯಗಳು ತೀರ್ಥಕ್ಷೇತ್ರಗಳು ಇಂಥವರ ಗುರಿ. ನಾವು ಸವಾಲನ್ನು ಎದುರಿಸುತ್ತೇವೆ ನಮ್ಮ ಸಮಾಜ ಸಶಕ್ತವಾಗಿದೆ ಎಂದು ಸಂತೋಷ್ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವಿ. ಸುನಿಲ್ ಕುಮಾರ್, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಪಕ್ಷದ ಹಿರಿಯ ಮುಖಂಡರಾದ ಬೋಳ ಪ್ರಭಾಕರ ಕಾಮತ್, ಗುಜ್ಜಾಡಿ ಪ್ರಭಾಕರ ನಾಯಕ್, ಕೆ.ಟಿ. ಪೂಜಾರಿ, ಶೀಲಾ ಶೆಟ್ಟಿ ಉಪಸ್ಥಿತರಿದ್ದರು.