ಕೆಮ್ಮಿನ ಸಿರಪ್​​​​​ಗೆ ಸೇವಿಸಿ 11 ಮಕ್ಕಳು ಸಾವು: ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡದಂತೆ ಕೇಂದ್ರ ಆದೇಶ

0
130

 ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿದ 11 ಮಕ್ಕಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಮಧ್ಯಪ್ರದೇಶದ ಛಿಂದ್‌ವಾರಾ ಜಿಲ್ಲೆಯಲ್ಲಿ 9 ಮಕ್ಕಳು ಮತ್ತು ರಾಜಸ್ಥಾನದ ಭರತ್ ಹಾಗೂ ಸಿಕರ್‌ನಲ್ಲಿ 2 ಮಕ್ಕಳು ಸೇರಿ ಒಟ್ಟು 11 ಕಂದಮ್ಮಗಳು ಸಾವನ್ನಪ್ಪಿದ್ದಾರೆ. ಈ ಘಟನೆಗಳ ಬೆನ್ನಲ್ಲೇ ರಾಜಸ್ಥಾನ ಸರ್ಕಾರವು ಕೇಸನ್ಸ್ ಫಾರ್ಮಾ ಕಂಪನಿಯ 19 ಔಷಧಿಗಳ ಮಾರಾಟ ಮತ್ತು ವಿತರಣೆಯನ್ನು ಸ್ಥಗಿತಗೊಳಿಸಿದೆ. ಅಲ್ಲದೆ, ರಾಜಸ್ಥಾನದ ಔಷಧ ನಿಯಂತ್ರಕರಾದ ರಾಜಾರಾಮ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ. ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಎಂಬ ಎರಡು ಕೆಮ್ಮಿನ ಸಿರಪ್‌ಗಳು ಮಕ್ಕಳ ಸಾವಿಗೆ ಕಾರಣವಾಗಿವೆ ಎಂದು ಆರೋಪಿಸಲಾಗಿದೆ. ಈ ಸಿರಪ್‌ಗಳನ್ನು ಸೇವಿಸಿದ ಮಕ್ಕಳಿಗೆ ಮೂತ್ರ ವಿಸರ್ಜನೆ ನಿಂತು, ದೇಹದಲ್ಲಿ ಊತ ಕಾಣಿಸಿಕೊಂಡು, ಕಿಡ್ನಿ ವೈಫಲ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಾಮಾನ್ಯವಾಗಿ ಕೆಮ್ಮು, ಶೀತ ಇದ್ದರೆ ಪೋಷಕರು ವೈದ್ಯರ ಸಲಹೆಯಂತೆ ಸಿರಪ್‌ಗಳನ್ನು ನೀಡುವುದು ರೂಢಿ, ಆದರೆ, ಈ ಘಟನೆ ಪೋಷಕರಲ್ಲಿ ಭಯ ಹುಟ್ಟಿಸಿದೆ. ಈ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ತೀವ್ರ ಎಚ್ಚರಿಕೆ ವಹಿಸಿದೆ. ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಸಿರಪ್ ನೀಡದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಸಾಮಾನ್ಯವಾಗಿ ಸಿರಪ್‌ಗಳ ಅಗತ್ಯ ಇರುವುದಿಲ್ಲ. ತೀರಾ ಅಗತ್ಯವಿದ್ದರೆ ಮಾತ್ರ ವೈದ್ಯರ ಸಲಹೆಯಂತೆ ಸೂಕ್ತ ಪ್ರಮಾಣದಲ್ಲಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.

LEAVE A REPLY

Please enter your comment!
Please enter your name here