ಕ್ಯಾನ್ಸರ್ ರೋಗ ಬಂದಾಗ ಬಹಳಷ್ಟು ಮಂದಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಕ್ಯಾನ್ಸರ್ ವಿರುದ್ಧ ಹೋರಾಡಲು ಮಾನಸಿಕ ಸಾಂತ್ವನದ ಜೊತೆಗೆ ದೇಹಕ್ಕೆ ಕ್ಯಾನ್ಸರ್ ಜಯಿಸುವ ಆಹಾರದ ಅಗತ್ಯವೂ ಇದೆ. ಕ್ಯಾನ್ಸರ್ ವಿರುದ್ಧ ಜಯಿಸಲು ನಮ್ಮ ಜೀವನ ಶೈಲಿ ಬದಲಾಯಿಸುವ ಜೊತೆಗೆ, ಆಹಾರ ಪದ್ಧತಿ ಬದಲಾಯಿಸಿ ಆಹಾರದ ಆಯ್ಕೆಯಲ್ಲಿ ವಿಶೇಷವಾಗಿ ಗಮನ ನೀಡಬೇಕಾಗುತ್ತದೆ. ಕ್ಯಾನ್ಸರ್ ರೋಗ ಬರೀ ವಂಶವಾಹಿನಿಗಳ ನ್ಯೂನತೆ ಅಲ್ಲದೆ ಕಲುಷಿತ ವಾತಾವರಣ ಅನಾರೋಗ್ಯಕರ ಜೀವನಶೈಲಿ ಮತ್ತು ಅಸಮರ್ಪಕ ಆಹಾರ ಪದ್ಧತಿಯಿಂದ ಬರುತ್ತದೆ ಎಂದು ಎಲ್ಲರಿಗೂ ತಿಳಿದ ವಿಚಾರ. ದೇಹದ ಲಿವರ್ ನ ಆರೋಗ್ಯ ಕಾಪಾಡಿಕೊಳ್ಳುವುದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯಂತ ಅನಿವಾರ್ಯ ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಗತ್ಯವೂ ಇರುತ್ತದೆ. ಕ್ಯಾನ್ಸರ ಗೆ ಬಳಸುವ ಹೆಚ್ಚಿನ ಔಷಧಿಗಳು ಲಿವರ್ ಗೆ ಮಾರಕವಾಗುವ ಕಾರಣದಿಂದ ಆಹಾರದಲ್ಲಿ ಪೂರಕವಾದ ಬದಲಾವಣೆ ಅತೀ ಅಗತ್ಯವಾಗಿರುತ್ತದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಹೆಚ್ಚಿನ ಎಲ್ಲಾ ಔಷಧಿಗಳ ಅಡ್ಡ ಪರಿಣಾಮ ಆರೋಗ್ಯವಂತ ಜೀವಕೋಶಗಳ ಮಲೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಜೀವಕೋಶಗಳ ಆರೋಗ್ಯ ವೃದ್ಧಿಸುವ ಮತ್ತು ಜೀವಕೋಶಗಳ ಚೈತನ್ಯ ಹೆಚ್ಚಿಸುವ ಆಹಾರ ಅತೀ ಅಗತ್ಯ ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ.
ಆಂಟಿಆಕ್ಸಿಡೆಂಟ್ ಮತ್ತು ಪೈಟೋ ಕೆಮಿಕಲ್ಸ್ ಇರುವ ಆಹಾರ ಸೇವಿಸುವುದರಿಂದ ಜೀವಕೋಶಗಳ ಆರೋಗ್ಯ ವೃದ್ಧಿಸುತ್ತದೆ. ಜೀವಕೋಶಗಳ ಹಾನಿಯಾಗದಂತೆ ತಡೆದು ಅನವಶ್ಯಕ ವಿಷಕಾರಿ ವಸ್ತುಗಳನ್ನು ಹೊರ ಹಾಕುವ ಸಾಮಥ್ರ್ಯ ಆಂಟಿ ಆಕ್ಸಿಡೆಂಟ್ ಜಾಸ್ತಿ ಇರುವ ಆಹಾರಕ್ಕೆ ಇದೆ ಎಂದು ತಿಳಿದು ಬಂದಿದೆ.

ಯಾವ ಆಹಾರ ಸೇವಿಸಬೇಕು?
1) ಅರಶಿನ ಅಥವಾ ಟರ್ಮರಿಕ್: ಅರಷಿನದಲ್ಲಿ ಹೆಚ್ಚು ಕುರ್‍ಕುಮಿನ್ ಎಂಬ ವಸ್ತು ಇದ್ದು ಇದು ಕ್ಯಾನ್ಸರ್ ವಿರೋಧಿ ಗುಣ ಹೊಂದಿರುತ್ತದೆ. ಅದೇ ರೀತಿ ಅರಿಶಿನ ಉರಿಯೂತ ನಿಯಂತ್ರಿಸುವ ಮತ್ತು ಜೀವಕೋಶಗಳ ಚೈತನ್ಯ ವೃದ್ಧಿಸುವ ಗುಣ ಹೊಂದಿರುತ್ತದೆ. ಹೆಚ್ಚು ಇರುವ ಆಂಟಿಆಕ್ಸಿಡೆಂಟ್‍ಗಳು ಕೂಡಾ ‘ಟರ್ಮರಿಕ್’ ಅನ್ನು ಕ್ಯಾನ್ಸರ್ ವಿರುದ್ಧದ ಬ್ರಹ್ಮಾಸ್ತ್ರ ಎಂಬ ಹಣೆಪಟ್ಟಿ ಪಡೆದಿದೆ.
2) ಜಿಂಜರ್ ಅಥವಾ ಶುಂಠಿ ನಿರಂತರವಾಗಿ ಹಿತಮಿತವಾಗಿ ಶುಂಠಿ ಸೇವಿಸುವುದರಿಂದ ಕ್ಯಾನ್ಸರ್ ಬೆಳೆಯದಂತೆ ಜೀವಕೋಶಗಳನ್ನು ರಕ್ಷಿಸುತ್ತದೆ ಎಂದು ಅಂದಾಜಿಸಲಾಗಿದೆ. ತನ್ನ ಉರಿಯೂತ ನಿಯಂತ್ರಣ ಗುಣ ಮತ್ತು ಆಂಟಿ ಆಕ್ಸಿಡೆಂಟ್ ಗುಣದಿಂದಾಗಿ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಶುಂಠಿಗೆ ವಿಶೇಷ ಸ್ಥಾನ ದೊರಕಿದೆ.
3) ಸ್ಪಿನಾಜ್ ಅಥವಾ ಪಾಲಕ್ ಸೊಪ್ಪು: ಅತೀ ಹೆಚ್ಚು ಆಂಟಿ ಆಕ್ಸಿಡೆಂಟ್, ವಿಟಮಿನ್, ಮಿನರಲ್(ಲವಣ) ಹೊಂದಿರುವ ಕಾರಣದಿಂದ ದೇಹದ ರಕ್ಷಣಾ ವ್ಯವಸ್ಥೆಯನ್ನು ವೃದ್ದಿಸುವ ಗುಣ ಪಾಲಕ್ ಸೊಪ್ಪಿಗೆ ಇರುತ್ತದೆ.
4) ಬೆಳ್ಳುಳ್ಳಿ/ಗಾರ್ಲಿಕ್: ದೇಹದ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸಿ ಕ್ಯಾನ್ಸರ್ ವಿರುದ್ಧ ಹೋರಾಡಲು ಹೆಚ್ಚಿನ ಚೈತನ್ಯ ಬೆಳ್ಳುಳ್ಳಿ ದೇಹಕ್ಕೆ ನೀಡುತ್ತದೆ ಎಂದೂ ತಿಳಿದು ಬಂದಿದೆ. ಅದೇ ರೀತಿ ಹಲವು ರೀತಿಯ ಕ್ಯಾನ್ಸರ್ ಬೆಳವಣಿಗೆ ಆಗದಂತೆ ಗಾರ್ಲಿಕ್ ತಡೆಯುತ್ತದೆ ಎಂದೂ ಅಂದಾಜಿಸಲಾಗಿದೆ.
5) ಕಾಳು ಪದಾರ್ಥಗಳು: ಮಸೂರ, ಬಟಾಣಿ, ಬೀನ್ಸ್ ಮುಂತಾದ ಕಾಳುಗಳು ಅತೀ ಹೆಚ್ಚು ನಾರು ಮತ್ತು ಪ್ರೊಟೀನ್ ಹೊಂದಿರುತ್ತದೆ. ಇಂತಹಾ ಆಹಾರ ದೇಹದ ರಕ್ಷಣಾ ವ್ಯವಸ್ಥೆಯನ್ನು ಹದಗೊಳಿಸಿ ರಕ್ಷಣೆ ನೀಡುತ್ತದೆ.
6) ಬ್ರೋಕೋಲಿ: ವಿಟಮಿನ್ ಲವಣ, ನಾರು ಮತ್ತು ಪ್ರೊಟೀನ್ ಹೊಂದಿರುವ ಈ ಆಹಾರ ಆಂಟಿಆಕ್ಸಿಡೆಂಟ್ ಮತ್ತು ಪೈಟೋಕೆಮಿಕಲ್ ಹೊಂದಿದ್ದು, ಕ್ಯಾನ್ಸರ್ ವಿರುದ್ಧ ಹೋರಾಡಲು ಹೆಚ್ಚಿನ ಶಕ್ತಿ ನೀಡುತ್ತದೆ.
7) ತಾಜಾ ಹಣ್ಣುಗಳು: ಬ್ಲೂಬೆರ್ರಿ, ಸ್ಟ್ರಾಬೆರ್ರಿ, ರಾಸ್ಪ್‍ಬೆರ್ರಿ, ಹಣ್ಣುಗಳಲ್ಲಿ ಅತೀ ಹೆಚ್ಚು ವಿಟಮಿನ್, ಮಿನರಲ್, ಆಂಟಿ ಆಕ್ಸಿಡೆಂಟ್ ಮತ್ತು ಆಂಥೊಸಯನಿನ್ಸ್ ಕೆಮಿಕಲ್ ಹೊಂದಿದ್ದು, ಉರಿಯೂತ ನಿಯಂತ್ರಣ ಮಾಡಿ ಜೀವಕೋಶಗಳ ಆಯಸ್ಸು ವೃದ್ಧಿಸುತ್ತದೆ.
8) ವಿಟಮಿನ್ ಸಿ ಜಾಸ್ತಿ ಇರುವ ಸಿಟ್ರಸ್ ಹಣ್ಣುಗಳು: ಕಿತ್ತಳೆ ದ್ರಾಕ್ಷೆ, ಮುಸುಂಬಿ, ಲಿಂಬೆ ಪೇರಳೆ ಇತ್ಯಾದಿಗಳಲ್ಲಿ ಅತೀ ಹೆಚ್ಚು ವಿಟಮಿನ್ ಸಿ ಇರುತ್ತದೆ ಮತ್ತು ನಾರಿನಾಂಶ ಹೆಚ್ಚಾಗಿರುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ವೃದ್ಧಿಸುವ ಸಾಮಥ್ರ್ಯ ಈ ಹಣ್ಣುಗಳಿಗೆ ಇರುತ್ತದೆ.
9) ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ನೈಸರ್ಗಿಕ ಪಾನೀಯ ಸೇವನೆಯಿಂದ ದೇಹದಲ್ಲಿನ ವಿಷಕಾರಿ ವಸ್ತುಗಳು ಹೊರ ಹಾಕಲ್ಪಡುತ್ತದೆ. ಕೃತಕ ಪಾನೀಯ ಕೃತಕ ಆಹಾರ, ರೆಡ್‍ಮೀಟ್, ಸಂಸ್ಕರಿಸಿದ ಆಹಾರವನ್ನು ಕ್ಯಾನ್ಸರ್ ರೋಗಿಗಳು ಬಳಸಲೇ ಬಾರದು. ಈ ಆಹಾರ ದೇಹದ ಜೀವಕೋಶಗಳಉರಿಯೂತ ಜಾಸ್ತಿ ಮಾಡುತ್ತದೆ.
ಕೊನೆಮಾತು:
ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಕಿಮೋಥೆರಮಿ, ರೇಡಿಯೋಥೆರಮಿ ಮತ್ತು ಸರ್ಜರಿಯ ಜೊತೆಗೆ ಆಹಾರಕ್ಕೂ ಅತೀ ಹೆಚ್ಚಿನ ಮಹತ್ವ ಇದೆ. ಮಾನಸಿಕ ಸಾಂತ್ವನ, ನೈತಿಕ ಬೆಂಬಲ ನೀಡುವುದರ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಅತೀ ಅಗತ್ಯ. ಜೀವಕೋಶಗಳ ವಯಸ್ಸು ವೃದ್ಧಿಸುವ ಆಂಟಿ ಆಕ್ಸಿಡೆಂಟ್ ಜಾಸ್ತಿ ಇರುವ ಆಹಾರ ಮತ್ತು ಜೀವಕೋಶಗಳನ್ನು ರಕ್ಷಿಸುವ ಪೈಟೋಕೆಮಿಕಲ್ ಜಾಸ್ತಿ ಇರುವ ಆಹಾರ ಸೇವನೆ ಕ್ಯಾನ್ಸರ್ ರೋಗಿಗಳಿಗೆ ಅತೀ ಅಗತ್ಯ ಎಂಬುದು ಸಾಬೀತಾಗಿದೆ. ಜೀವಕೋಶಗಳಲ್ಲಿ ಉತ್ಪತ್ತಿಯಾಗುವ ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಹಾಕುವಲ್ಲಿ ಆಹಾರ ಬಹುಮುಖ್ಯ ಭೂಮಿಕೆ ವಹಿಸುತ್ತದೆ ಎಂದೂ ಅಧ್ಯಯನಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ಆಹಾರವನ್ನೇ ಔಷಧಿಯಂತೆ ಸೇವಿಸಿದಲ್ಲಿ ಕ್ಯಾನ್ಸರ್ ವಿರುದ್ಧ ಜಯ ಸಾಧಿಸಲು ಸಾಧ್ಯವಿದೆ ಎಂಬುದು ನಿಜವಾಗಿದೆ.
ಡಾ| ಮುರಲೀ ಮೋಹನ್ ಚೂಂತಾರು
BDS, MDS, DNB, MBA, FPFA,
MOSRCREd( UK)
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು
9845135787