ಸಮುದಾಯ ಭವನಕ್ಕೆ 10 ಲಕ್ಷ ಅನುದಾನ : ಶಾಸಕ ಗುರ್ಮೆ ಸುರೇಶ ಶೆಟ್ಟಿ

ಪೆರ್ಡೂರು : ನಿಮ್ಮೇಲ್ಲರ ಋಣ ನನ್ನ ಮೇಲಿದೆ. ಪೆರ್ಡೂರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ೧೦ ಲಕ್ಷ ರೂಪಾಯಿ ಅನುದಾನ ನೀಡುತ್ತೇನೆ. ಸಂಘ ಸಂಸ್ಥೆಗಳು ಸಮಾಜದ ದೀನ ದುರ್ಬಲರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಹೇಳಿದರು.
ಅವರು ಭಾನುವಾರ ಪೆರ್ಡೂರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ನೂತನ ಸಮುದಾಯ ಭವನದಲ್ಲಿ ನಡೆದ ಶ್ರೀ ವಿಶ್ವಕರ್ಮ ಯಜ್ಞ ಮಹಾಪೂಜೆ, ೩೩ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಸಂಘದ ಕಾರ್ಯಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನೇರವಾಗಿ ಮುಖ್ಯಮಂತ್ರಿಯವರಿಗೆ ವಿಶೇಷ ಮನವಿ ಮಾಡಿ ಹೆಚ್ಚಿನ ಅನುದಾನ ಕೊಡಿಸುವ ಭರವಸೆ ನೀಡಿದರು.
ಪೆರ್ಡೂರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ವೆಂಕಟರಮಣ ಆಚಾರ್ಯ ಬುಕ್ಕಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಗರ್ಧರಬೆಟ್ಟು ರಾಘವೇಂದ್ರ ಪುರೋಹಿತ್ ಕೀಳಿಂಜೆ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ ಮಾತನಾಡಿ ಪೆರ್ಡೂರು ಶ್ರೀ ವಿಶ್ವಕರ್ಮ ಸಮುದಾಯ ಭವನದ ಮುಖ್ಯವೇದಿಕೆಯ ಸಂಪೂರ್ಣ ವೆಚ್ಚ ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಅಶಕ್ತ ಕುಟುಂಬಗಳಿಗೆ ನೆರವು ಹಸ್ತಾಂತರ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಕಟ್ಟಡ ಸಮಿತಿಯ ನೂತನ ಗೌರವಾಧ್ಯಕ್ಷ ಪಿ.ಎನ್.ದಿನೇಶ ಆಚಾರ್ಯ, ಅಧ್ಯಕ್ಷ ರವಿಕಿರಣ್ ಆಚಾರ್ಯ, ಮಹಿಳಾ ಮಂಡಳಿಯ ಅಧ್ಯಕ್ಷೆ ಸುಕನ್ಯಾ ಆಚಾರ್ಯ, ಯುವ ವೃಂದದ ಅಧ್ಯಕ್ಷ ದಯಾನಂದ ಆಚಾರ್ಯ, ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಉಪೇಂದ್ರ ಆಚಾರ್ಯ ಸ್ವಾಗತಿಸಿ ನಿರೂಪಿಸಿದರು. ರವೀಂದ್ರ ಆಚಾರ್ಯ ವಂದಿಸಿದರು.