ಉಡುಪಿ: ಇನ್‌ಸ್ಟಾಗ್ರಾಮ್ ಜಾಹೀರಾತು ನಂಬಿ ಲಕ್ಷಗಟ್ಟಲೆ ಹಣ ಕಳೆದುಕೊಂಡ ಯುವತಿ

0
103


ಉಡುಪಿ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಉದ್ಯೋಗದ ಹೆಸರಿನಲ್ಲಿ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇನ್‌ಸ್ಟಾಗ್ರಾಮ್ ಜಾಹೀರಾತು ನಂಬಿ ಯುವತಿಯೋರ್ವಳು 1.93 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಉದ್ಯಾವರ ನಿವಾಸಿ ನಿಲೋಫರ್ (26ವರ್ಷ) ಎಂಬವರೇ ವಂಚನೆಗೆ ಒಳಗಾದವರು. ನಿಲೋಫರ್ ವರ್ಕ್‌ ಫ್ರಮ್‌ ಹೋಮ್‌ ಕೆಲಸಕ್ಕೆ ಹುಡುಕಾಟ ನಡೆಸುತ್ತಿದ್ದರು.

ಈ ವೇಳೆಯಲ್ಲಿ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬಂದಿದ್ದ ಜಾಹೀರಾತು ನಂಬಿದ್ದಾರೆ. ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದ ಬೆನ್ನಲ್ಲೇ, ಮೊಬೈಲ್‌ ಸಂಖ್ಯೆಯಿಂದ ವಾಟ್ಸಾಪ್‌ ಮೂಲಕ ಜಾಬ್‌ ಆಫರ್‌ ಬಂದಿದೆ.
ಟೆಲಿಗ್ರಾಂನಲ್ಲಿ ಶಬಾನಾ ಖಾನ್, ಸಾನಿಯಾ ಪಟೇಲ್ ಹಾಗೂ ಕಾರ್ತಿಕ್ ಎಂಬುವವರ ಪರಿಚಯವಾಗಿದೆ. ವಂಚಕರು ಟಾಸ್ಕ್ ನೀಡಿ, ಅದನ್ನು ಮುಗಿಸಿದರೆ ಹಣ ಕೊಡುವುದಾಗಿ ತಿಳಿಸಿ, ನಂತರ ಹೆಚ್ಚಿನ ಟಾಸ್ಕ್‌ಗಳಿಗೆ ಹಣ ಹೂಡಿಕೆ ಮಾಡುವಂತೆ ನಿಲೋಫರ್‌ಗೆ ತಿಳಿಸಿದ್ದಾರೆ.

ಇದನ್ನು ನಂಬಿದ ನಿಲೋಫರ್ ಅವರು ತಮ್ಮ ಹಾಗೂ ತಮ್ಮ ತಾಯಿಯ ಬ್ಯಾಂಕ್ ಖಾತೆಗಳಿಂದ ಅಪರಿಚಿತರು ತಿಳಿಸಿದ ವಿವಿಧ ಖಾತೆಗಳಿಗೆ ಒಟ್ಟು 1,93,000/- ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ.
ಆದರೆ, ಹಣ ಹೂಡಿಕೆ ಮಾಡಿದ ನಂತರ ವಂಚಕರು ಯಾವುದೇ ಲಾಭದ ಹಣವನ್ನಾಗಲಿ ಅಥವಾ ಹೂಡಿಕೆ ಮಾಡಿದ ಹಣವನ್ನಾಗಲಿ ಹಿಂತಿರುಗಿಸಿಲ್ಲ.

ತಾನು ಮೋಸ ಹೋಗಿರುವುದನ್ನು ಅರಿತ ನಿಲೋಫರ್ ಉಡುಪಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆನ್‌ಲೈನ್‌ ವಂಚನೆಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾರ್ವಜನಿಕರು ಇಂತಹ ಆನ್‌ಲೈನ್ ಆಮಿಷಗಳ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here