ಉಡುಪಿ: ಕೃಷ್ಣಮಠ ಹಾಗೂ ಮಣಿಪಾಲಕ್ಕೆ ನಗರದಿಂದ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಕಲ್ಸಂಕದಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್ನಿಂದ ವಾಹನ ಸವಾರರು ಹೈರಾಣಾಗುತ್ತಿದ್ದು, ಫೆ . 5ರಂದು ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಗರಸಭೆ ಪೌರಾಯುಕ್ತರಿಗೆ ಸಿಗ್ನಲ್ ಅಳವಡಿಸುವಂತೆ ಪತ್ರ ಬರೆದು ಬರೋಬ್ಬರಿ 9 ತಿಂಗಳು ಕಳೆದರೂ ಸಿಗ್ನಲ್ ಲೈಟ್ ಕೂಸು ಇನ್ನೂ ಹುಟ್ಟಿಲ್ಲ.
ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಕಲ್ಸಂಕ ಜಂಕ್ಷನ್ ಸೇರಿದಂತೆ 5 ಕಡೆಗಳಲ್ಲಿ ಸಿಗ್ನಲ್ ಅಳವಡಿಸುವಂತೆ ನಗರಸಭೆಗೆ ಕೋರಿಕೆ ಸಲ್ಲಿಸಿದ್ದರು. ನಗರದ ಕಲ್ಸಂಕ, ಬನ್ನಂಜೆ, ಶಿರಿಬೀಡು, ಅಂಬಾಗಿಲು, ಜೋಡುಕಟ್ಟೆ ಜಂಕ್ಷನ್ಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸುವಂತೆ ಪತ್ರ ಬರೆದಿದ್ದರು. ಆದರೆ 6 ತಿಂಗಳು ಈ ಬಗ್ಗೆ ಯಾವುದೇ ತ್ವರಿತ ಕ್ರಮ ಕೈಗೊಳ್ಳಲಿಲ್ಲ. ಆಗಸ್ಟ್ನಲ್ಲಿ ಕಲ್ಸಂಕ ಮತ್ತು ಮಣಿಪಾಲ ಟೈಗರ್ ಸರ್ಕಲ್ನಲ್ಲಿ ಸಿಗ್ನಲ್ ಅಳವಡಿಗೆ ಟೆಂಡರ್ ಪ್ರಕಟಣೆ ನೀಡಲಾಗಿತ್ತು. ಸೆಪ್ಟೆಂಬರ್ 30ರಂದು ನಡೆದ ಸಾಮಾನ್ಯ ಸಭೆಯಲ್ಲಿ ಟೆಂಡರ್ಗೆ ಅನುಮತಿ ಪಡೆದುಕೊಂಡಿದ್ದರೂ ಇನ್ನೂ ವರ್ಕ್ ಆರ್ಡರ್ ನೀಡಲಾಗಿಲ್ಲ. ನವೆಂಬರ್ ತಿಂಗಳಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅವಧಿ ಮುಗಿಯಲಿದ್ದು, ನಂತರ ಸಿಗ್ನೆಲ್ ಯೋಜನೆ ಭವಿಷ್ಯ ಏನು ಬೇಕಾದರೂ ಆಗಬಹುದು ಎಂಬುದು ಸಾರ್ವಜನಿಕರ ಆತಂಕ.
ದೀಪಾವಳಿ, ಕ್ರಿಸ್ಮಸ್ ಸಹಿತ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡೇ ಉಡುಪಿಗೆ ಆಗಮಿಸುವ ಸಾಧ್ಯತೆಗಳಿದ್ದು, ಕರಾವಳಿ ಜಂಕ್ಷನ್ನಿಂದ ಕಲ್ಸಂಕದವರೆಗೆ ವಾಹನ ದಟ್ಟಣೆ ಹೆಚ್ಚಾಗಲಿದೆ. ಇದಕ್ಕೂ ಮುನ್ನ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಿದರೆ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವಾಗಲಿದೆ.
ಪೊಲೀಸರಿಂದ ಅಸಾಧ್ಯ
ಕಲ್ಸಂಕದಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಹೆಚ್ಚು ಟ್ರಾಫಿಕ್ ಇರುತ್ತದೆ. ಬೆಳಗ್ಗೆ ಕೆಲವೊಮ್ಮೆ ಓರ್ವ ಪೊಲೀಸ್ ಮಾತ್ರ ಕರ್ತವ್ಯದಲ್ಲಿರುತ್ತಾರೆ. ಇವರಿಗೆ 4 ದಿಕ್ಕಿನಲ್ಲಿ ವಾಹನ ಸಂಚಾರ ನಿಯಂತ್ರಣ ಕಷ್ಟ ಸಾಧ್ಯವಾಗಿದ್ದು, ಇದರಿಂದ ವಾಹನ ಸವಾರರು ಬೇಕಾಬಿಟ್ಟಿಯಾಗಿ ತೆರಳುತ್ತಾ ಟ್ರಾಫಿಕ್ ಜಾಮ್ ಉಂಟಾಗಲು ಕಾರಣರಾಗುತ್ತಿದ್ದಾರೆ. ಇದಕ್ಕೆ ಮೊದಲ ಕಡಿವಾಣ ಹಾಕಬೇಕಿದೆ. ರಾಜಾಂಗಣ ಪಾರ್ಕಿಂಗ್ ಪ್ರದೇಶದಿಂದ ಬರುವ ವಾಹನಗಳಿಗೆ ಬ್ರೇಕ್ ಇರುವುದೇ ಇಲ್ಲ. ನೇರವಾಗಿ ಸರ್ಕಲ್ನಲ್ಲಿ ಬಂದು ನಿಲ್ಲುತ್ತವೆ. ಪೊಲೀಸರು ಕೈ ಅಡ್ಡ ಹಾಕಿದರೆ ಮಾತ್ರ ವಾಹನ ನಿಲ್ಲಿಸುವ ಚಾಲಕರ ಸ್ವಭಾವದಿಂದಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಪರಿಹಾರವಾಗಿದೆ. ವಾಹನಗಳೆಲ್ಲಾ ಬಂದು ಸರ್ಕಲ್ನಲ್ಲಿ ನಿಲ್ಲುವುದು ಕಲ್ಸಂಕ ಜಂಕ್ಷನ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಲು ಮುಖ್ಯ ಕಾರಣ. ಹೀಗಾಗಿ ಒಂದೊಂದೇ ಮಾರ್ಗದಲ್ಲಿ ವಾಹನಗಳು ಮುಂದುವರಿಯಲು ಅನುಮತಿ ನೀಡುವುದರಿಂದ ಮಾತ್ರ ಸಂಚಾರ ನಿಯಂತ್ರಿಸಬಹುದು.