ಬಾಗಲಕೋಟೆ: ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನೇ ಕೈಕಾಲು ಕಟ್ಟಿ ಹಾಕಿ, ಕತ್ತು ಕುಯ್ದು ಕೊಲೆ ಮಾಡಿದ ದಾರುಣ ಘಟನೆ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ. 28 ವರ್ಷದ ವೆಂಕಟೇಶ್ ಗಿರಿಸಾಗರ್ ಎಂಬಾತ ತನ್ನ 58 ವರ್ಷದ ತಾಯಿ ಶಾವಕ್ಕ ಗಿರಿಸಾಗರ್ ಕೈ ಕಾಲು ಕಟ್ಟಿ ಬಾಯಲ್ಲಿ ಬಟ್ಟೆ ತುರುಕಿ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾನೆ. ಶಾವಕ್ಕ ಗಿರಿಸಾಗರ್ತಾಯಿ ಮನೆಯಲ್ಲಿ ನರಳಾಡಿ ಪ್ರಾಣ ಬಿಟ್ಟಿದ್ದಾರೆ.
ಶಾವಕ್ಕ ಗಿರಿಸಾಗರ ಪತಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇನ್ನು ಮಗಳನ್ನು ಕೂಡ ಮದುವೆ ಮಾಡಿ ಬೇರೆ ಊರಿಗೆ ಕೊಡಲಾಗಿತ್ತು. ಮನೆಯಲ್ಲಿ ಮಗ ವೆಂಕಟೇಶ್ ಹಾಗೂ ಶಾವಕ್ಕ ವಾಸ ಮಾಡುತ್ತಿದ್ದರು. ಕಳೆದ 15 ವರ್ಷಗಳಿಂದ ತುಳಸಿಗೇರಿ ಗ್ರಾಮದಲ್ಲಿ ಒಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೆ ಮಗ ವೆಂಕಟೇಶ್ ಯಾವುದೇ ಕೆಲಸ ಕಾರ್ಯ ಮಾಡದೆ ಕುಡಿತದ ದಾಸನಾಗಿದ್ದ. ತಾಯಿ ಶಾವಕ್ಕ ಕೂಲಿ ನಾಲೆ ಮಾಡಿ ಮಗನನ್ನು ಸಾಕಿ ಸಲುತ್ತಿದ್ದಳು .ಆದರೆ ವೆಂಕಟೇಶ್ ನಿತ್ಯ ಕುಡಿದು ಬಂದು ತಾಯಿ ಜೊತೆ ಮಗ ಜಗಳವಾಡುತ್ತಿದ್ದ. ಜೊತೆಗೆ ಮದ್ಯಪಾನ ಮಾಡಲು ಹಣ ಕೊಡು ಎಂದು ಪೀಡಿಸುತ್ತಿದ್ದ.
ಗುರುವಾರ ಕೂಡ ಎಂದಿನಂತೆಯೇ ಕುಡಿಯಲು ಹಣ ಕೊಡು ಎಂದು ಪೀಡಿಸಿದ್ದಾನೆ. ತಾಯಿ ನಿರಾಕರಿಸಿದಾಗ, ಬಟ್ಟೆಯಿಂದ ಆಕೆಯ ಕೈ ಕಾಲು ಕಟ್ಟಿ, ಬಾಯಲ್ಲಿ ಬಟ್ಟೆ ತುರುಕಿ ಕತ್ತು ಕೊಯ್ದು ಕೊಲೆ ಮಾಡಿ ಓಡಿಹೋಗಿದ್ದಾನೆ.

