ಗಣತಿಗೆ ನಿರಾಕರಣೆ- ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಸರ್ಕಾರಕ್ಕೆ ಮಾಡುವ ಅಪಮಾನ : ಕೆಪಿಸಿಸಿ ವಕ್ತಾರ ಎಚ್ .ಎ .ವೆಂಕಟೇಶ್

0
45

ಸಾಮಾಜಿಕ, ಶೈಕ್ಷಣಿಕ ಗಣತಿ ವಿರೋಧಿಸುವುದು ಜನರಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಸರ್ಕಾರಕ್ಕೆ ಮಾಡುವ ಅಪಮಾನ : ಕೆಪಿಸಿಸಿ ವಕ್ತಾರ ಎಚ್ .ಎ .ವೆಂಕಟೇಶ್

ಬೆಂಗಳೂರು,ಅ.17; ರಾಜ್ಯ ಸರ್ಕಾರದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಗಣತಿಗೆ ಮಾಹಿತಿ ನೀಡುವುದಿಲ್ಲ ಎನ್ನುವ ಮೂಲಕ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಜನರಿಂದ ಆಯ್ಕೆಯಾದ ಸರ್ಕಾರ ರೂಪಿಸಿ ಜಾರಿಗೊಳಿಸಿದ ಕಾರ್ಯಕ್ರಮದ ಬಗ್ಗೆ ಅಸಡ್ಡೆ ತೋರಿರುವುದು ಖಂಡನೀಯ. ಇದು ಸರ್ಕಾರಕ್ಕೆ ಮಾಡಿದ ಅಪಮಾನ ಎಂದು ಕೆಪಿಸಿಸಿ ವಕ್ತಾರ ಎಚ್ .ಎ .ವೆಂಕಟೇಶ್ ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹಿರಿಯರ ಮನೆ ರಾಜ್ಯಸಭೆ ಸದಸ್ಯರಾಗಿರುವ ಸುಧಾ ಮೂರ್ತಿ, ತಮ್ಮ ಕುಟುಂಬದ ಮಾಹಿತಿ ನೀಡಿ ಮಾದರಿಯಾಗಬೇಕಿತ್ತು. ಸಮಾಜದ ದೃಷ್ಟಿಯಲ್ಲಿ ದೊಡ್ಡವರೆನಿಸಿಕೊಂಡವರು, ಜನ ಸಾಮಾನ್ಯರ ವಿಚಾರದಲ್ಲಿ ನಿಷ್ಕಾಳಜಿ ತೋರುವುದು ಸರಿಯಲ್ಲ ಎಂದಿದ್ದಾರೆ.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿ ಜಾರಿಯಾದ ಈ ಕಾರ್ಯಕ್ರಮ ಸರ್ಕಾರದ ಭಾಗ ಎಂಬುದನ್ನು ಅವರು ಮರೆತಿದ್ದಾರೆ. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಸರ್ಕಾರ ನೀಡಿದ ರಿಯಾಯಿತಿ ದರದ ದೊಡ್ಡ ಪ್ರಮಾಣದ ಭೂಮಿಯಲ್ಲಿ ತಮ್ಮ ವ್ಯವಹಾರ ಆರಂಭಿಸಿ ಯಶಸ್ಸು ಕಂಡಿದ್ದಾರೆ. ವ್ಯವಹಾರಿಕ ಮತ್ತು ಸಾಂಸ್ಥಿಕ ತೆರಿಗೆಯ ಬಹುಪಾಲು ವಿನಾಯಿತಿಯನ್ನು ಇನ್ಫೋಸಿಸ್ ಸಂಸ್ಥೆ ಪಡೆದುಕೊಂಡಿದೆ. ಈ ಉದ್ಯಮ ಸ್ಥಾಪನೆಗೆ ರೈತರು ಭೂಮಿ ನೀಡಿದ್ದಾರೆ, ಮೂಲಸೌಕರ್ಯವನ್ನು ಸರ್ಕಾರ ಒದಗಿಸಿದೆ ಎಂಬುದನ್ನು ಮರೆಯಬಾರದು ಎಂದಿದಾರೆ.
ಇವರ ಉದ್ಯಮ ಸಮಾಜ ಮತ್ತು ಸರ್ಕಾರದ ಸಹಕಾರದಿಂದ ಬೆಳೆದು ನಿಂತಿದೆ. ಆದರೆ ಈಗ ಈ ದಂಪತಿ ಸರ್ಕಾರ ನಡೆಸುವ ಸಮೀಕ್ಷೆಯಲ್ಲಿ ಭಾಗಿಯಾಗುವುದಿಲ್ಲ. ನಾವು ಹಿಂದುಳಿದವರಲ್ಲ ಎಂದು ಹೇಳುವ ಮೂಲಕ ಒಂದರ್ಥದಲ್ಲಿ ಸಮಾಜಕ್ಕೆ ಮತ್ತು ಸರ್ಕಾರಕ್ಕೆ ದ್ರೋಹವೆಸಗಿದ್ದಾರೆ. ಸರ್ಕಾರದ ಯೋಜನೆಗಳು ಎಲ್ಲರಿಗೂ ಸಮರ್ಪಕವಾಗಿ ದೊರೆಯಲು ಜನ ಸಮುದಾಯಗಳ ನಿಖರ ಅಂಕಿ ಅಂಶ ಅಗತ್ಯವಾಗಿ ಬೇಕಾಗಿದೆ.
ಸಾಮಾಜಿಕ ಜೀವನದಲ್ಲಿ ನೈತಿಕತೆ ಉಳಿಸಿಕೊಳ್ಳುವುದು ಬಹು ಮುಖ್ಯವಾಗುತ್ತದೆ. ಸಮಾಜದಲ್ಲಿ ನಾವು ಎತ್ತರದಲ್ಲಿದ್ದೇವೆ ಎಂದು ಭ್ರಮಿಸಿಕೊಂಡಿದ್ದಾರೆ. ಎಲ್ಲರೊಡಗೂಡಿ ಬಾಳುವುದೇ ನಿಜವಾದ ನೈತಿಕತೆಯಾಗಿದೆ. ಹೀಗಾಗಿ ಇವರು ಸಂವಿಧಾನಿಕ ನೈತಿಕತೆಯನ್ನೂ ಸಹ ಕಾಪಾಡಿಕೊಳ್ಳುವುದು ಅನಿವಾರ್ಯ. ಯೋಜನೆ ರೂಪಿಸಲೆಂದು ಸರ್ಕಾರ ಕೋರುವ ಮಾಹಿತಿಯನ್ನು ನೀಡುವುದಿಲ್ಲ ಎನ್ನುವುದು ಕೆಳ ಮಟ್ಟದ ರಾಜಕೀಯವಾಗಿದೆ. ಸುಧಾ ಮೂರ್ತಿ ದಂಪತಿಯ ಇಂತಹ ನಡವಳಿಕೆಯು ಇವರ ಮಾತು ಮತ್ತು ಕೃತಿಯ ನಡುವೆ ಬಹಳಷ್ಟು ಅಂತರವಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿದೆ ಎಂದು ಎಚ್ .ಎ .ವೆಂಕಟೇಶ್ ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here