ಪರಮಪೂಜ್ಯ ಡಾ! ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಶುಭಾಶೀರ್ವಾದದೊಂದಿಗೆ, ಉಡುಪಿ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಮಾರ್ಗದರ್ಶನದಲ್ಲಿ ತಾ.8-11-2025 ರಿಂದ 30-11-2025ರ ವರೆಗೆ ನಡೆಯುವ “ಲಕ್ಷ ಕಂಠ ಗೀತ ಗಾಯನ” ಹಾಗೂ “ಭಜನೋತ್ಸವ” ಕಾರ್ಯಕ್ರಮದ ಕುರಿತು ಶ್ರೀ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಅವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಬಸ್ರೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್, ಭಜನಾ ಪರಿಷತ್ ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಹಾಗೂ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್. ಉಪಸ್ಥಿತರಿದ್ದರು.
ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿ ಇದರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕೇಂದ್ರ ಸಮಿತಿ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಇದರ ಸಹಯೋಗದೊಂದಿಗೆ “ಗೀತ ಭಜನೋತ್ಸವ” ಹಾಗೂ “ಸಂತ ಸಮಾವೇಶ” ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 8ರಂದು ಉದ್ಘಾಟನೆಗೊಂಡು ನಿತ್ಯ ಸಂಜೆ ಗಂಟೆ 4.00ರಿಂದ 6.00ರ ವರೆಗೆ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 30ರಂದು ಸುಮಾರು 40 ರಿಂದ 50 ಸಾವಿರಕ್ಕಿಂತಲೂ ಮಿಕ್ಕಿ ಭಕ್ತಾದಿಗಳ ಸಮಾಗಮದೊಂದಿಗೆ ದೇಶದ ಪ್ರಮುಖ ಗಣ್ಯರು, ಸಂತರು, ಧಾರ್ಮಿಕ ಮುಖಂಡರ ಉಪಸ್ಥಿತಿಯಲ್ಲಿ ಈ ವಿನೂತನ ಕಾರ್ಯಕ್ರಮ ನಡೆಯಲಿದೆ.
ಇದರ ಪೂರ್ವಭಾವಿಯಾಗಿ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ರಾಜ್ಯ ಭಜನಾ ಪರಿಷತ್ತಿನ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರು ಹಾಗೂ ಪದಾಧಿಕಾರಿಗಳ ಸಭೆಯನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

