ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರದ್ದು ಪ್ರಮುಖ ಪಾತ್ರ

0
1


ಉಡುಪಿ: ದೇಶದ ಆಂತರಿಕ ಭದ್ರತೆ ಮತ್ತು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್​ ಇಲಾಖೆ ಪಾತ್ರ ಮಹತ್ವದ್ದಾಗಿದೆ ಎಂದು 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಎ. ಸಮೀಉಲ್ಲಾ ಹೇಳಿದರು.
ಮಂಗಳವಾರ ಜಿಲ್ಲಾ ಪೊಲೀಸ್​ ಇಲಾಖೆಯಿಂದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್​ ಪಡೆ ಕೇಂದ್ರಸ್ಥಾನದಲ್ಲಿ ಆಯೋಜಿಸಿದ್ದ ಪೊಲೀಸ್​ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿ ಮಾತನಾಡಿದರು.
ಪೊಲೀಸರು ಕೇವಲ ಅಪರಾಧ ಪ್ರಕರಣಗಳನ್ನು ತಡೆಯುವುದು ಮಾತ್ರವಲ್ಲದೆ ಪ್ರಾಕೃತಿಕ ವಿಕೋಪ, ಕೋವಿಡ್​ ಸಂದರ್ಭದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ನಾಗರಿಕರು ನೆಮ್ಮದಿಯ ಜೀವನ ನಡೆಸಲು ಪೊಲೀಸರ ಸೇವೆ ಕಾರಣ. ಹೀಗಾಗಿ ಪೊಲೀಸರ ಬಗ್ಗೆ ಸಮಾಜ ಸದಾ ಗೌರವ ಭಾವ ಹೊಂದಿರಬೇಕು ಎಂದರು.
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ಮಾತನಾಡಿ, ದೇಶದಲ್ಲಿ ಪ್ರಸಕ್ತ ವರ್ಷದಲ್ಲಿ 191 ಪೊಲೀಸರು ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಮೃತಪಟ್ಟಿದ್ದು, ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಹುತಾತ್ಮರಿಗೆ ಗೌರವ ಸಮರ್ಪಿಸಿದರು.
ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸುಧಾಕರ ಎಸ್​. ನಾಯಕ್​, ಎಎಸ್ಪಿ ಕಾರ್ಕಳ ಹರ್ಷ ಪ್ರಿಯಂವದಾ, ಕುಂದಾಪುರ ಡಿವೈಎಸ್ಪಿ ಎಚ್​.ಡಿ ಕುಲಕರ್ಣಿ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here