ಬಸ್ರೂರು: ತುಳುನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದ ಸಂಕೇತವಾದ ಶ್ರೀ ತುಳುವೇಶ್ವರ ದೇವಸ್ಥಾನ, ಬಸ್ರೂರುನಲ್ಲಿ ,( ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ವಠಾರ ) ಬರುವ ಅಕ್ಟೋಬರ್ 24, 2025 (ಅನುರಾಧ ನಕ್ಷತ್ರದಂದು) ಸಂಜೆ 4 ರಿಂದ ಭವ್ಯ ಸಹಸ್ರ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.
ಈ ದೀಪೋತ್ಸವವನ್ನು ತುಳುವರ್ಲ್ಡ್ ಫೌಂಡೇಶನ್, ತುಳುವ ಮಹಾಸಭೆ, ಹಾಗೂ ಶ್ರೀ ತುಳುವೇಶ್ವರ ಜೀರ್ಣೋದ್ಧಾರ ಸಮಿತಿಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.
ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ, ದೇವರು ತಮ್ಮ ಹಳೆಯ ವೈಭವದ ಪುನರ್ ನಿರ್ಮಾಣಕ್ಕಾಗಿ ಸನ್ನಿಧಾನ ವಿಸ್ತರಣೆ ಅಗತ್ಯವಿದೆ ಎಂಬ ಆಶಯವನ್ನು ಸೂಚಿಸಿದ ಹಿನ್ನೆಲೆಯಲ್ಲಿ, ದೇವಾಲಯದ ಪುನರ್ ವೈಭವೀಕರಣ ಕಾರ್ಯಕ್ಕೂ ಮುನ್ನ ಭಕ್ತಿಪೂರ್ಣ ಸಹಸ್ರ ದೀಪಾರ್ಚನೆ ನೆರವೇರಿಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮದ ವೇಳೆ ಶ್ರೀ ತುಳುವೇಶ್ವರ, ಶ್ರೀ ತುಳುವೇಶ್ವರಿ, ವರಾಹಿ ಪಂಜುರ್ಲಿ ಮತ್ತು ಪರಿವಾರ ದೈವಗಳಿಗೆ ಭಕ್ತರು ದೀಪಾರ್ಚನೆ ಸಲ್ಲಿಸಲಿದ್ದಾರೆ.
ಭಕ್ತರು “ತುಳುನಾಡಿನ ಶಾಂತಿ, ನೆಮ್ಮದಿ ಮತ್ತು ದೇವಾಲಯದ ಪುನರ್ ವೈಭವಕ್ಕಾಗಿ” ಪ್ರಾರ್ಥಿಸಲಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ಮಾಲಿಂಗೇಶ್ವರ ದೇವಸ್ಥಾನದಿಂದ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಬಳಿಕ ವೆಂಕಟರಮಣ ದೇವಸ್ಥಾನ, ಆಂಜನೇಯ ದೇವಸ್ಥಾನ ಮತ್ತು ಅಮ್ಮನವರು ದೇವಸ್ಥಾನಗಳಿಗೆ ಪ್ರಾರ್ಥನೆ ಸಲ್ಲಿಸುವ ಧಾರ್ಮಿಕ ಶೋಭಾಯಾತ್ರೆ ನಡೆಯಲಿದೆ.
ಅದಾದ ನಂತರ ಸಂಜೆ ಆರರಿಂದ ಸಹಸ್ರ ದೀಪೋತ್ಸವ ಭವ್ಯವಾಗಿ ನೆರವೇರಲಿದೆ.
ಈ ಸಂದರ್ಭ ಜಾನಪದ ಮತ್ತು ಸಾಂಪ್ರದಾಯಿಕ ನೃತ್ಯಗಳು ಸಾಂಕೇತಿಕ ಪ್ರದರ್ಶನಗಳು, ಮತ್ತು ಸ್ಥಳೀಯ ಕಲಾಪ್ರದರ್ಶನಗಳು ನಡೆಯಲಿದ್ದು, ಕಾರ್ಯಕ್ರಮಕ್ಕೆ ತುಳುನಾಡಿನ ಪರಂಪರೆಯ ಸೌಂದರ್ಯವನ್ನು ತುಂಬಲಿವೆ.
ಆಯೋಜನಾ ಸಮಿತಿ ವತಿಯಿಂದ ಪ್ರತಿ ಮನೆಯಲ್ಲಿ ತುಳುವೇಶ್ವರ–ತುಳುವೇಶ್ವರಿ ಹೆಸರಿನಲ್ಲಿ ಎರಡು ದೀಪ ಬೆಳಗಿಸಿ ದೇವರ ಕೃಪೆ ಕೋರಬೇಕೆಂದು ಭಕ್ತರಿಗೆ ವಿನಂತಿ ಮಾಡಲಾಗಿದೆ.
ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸಲು ತುಳುವೇಶ್ವರ–ತುಳುವೇಶ್ವರಿ, ವರಾಹಿ ಪಂಜುರ್ಲಿ ಹಾಗೂ ಪರಿವಾರ ದೈವಗಳ ಭಕ್ತರು ಎಲ್ಲರೂ ಆತ್ಮೀಯವಾಗಿ ಆಹ್ವಾನಿತರಾಗಿದ್ದಾರೆ.
✨ ತುಳುವೇಶ್ವರ ದೀಪೋತ್ಸವ – ದೇವರ ಬೆಳಕಿನಲ್ಲಿ ತುಳುನಾಡು ಪ್ರಜ್ವಲಿಸಲಿ! ಎಂಬುದೇ ಆಶಯ✨