ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಿರುವ ಐವನ್ ಡಿಸೋಜಾ ಅವರಿಗೆ ಪ್ರತಿಷ್ಠಿತ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ನೀಡಿ ಗೌರವಿಸಲಾಗುತ್ತದೆ. ನವೆಂಬರ್ 4ರಂದು ಪ್ಯಾರಿಸ್‌ನಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಐವನ್ ಡಿಸೋಜಾ ಅವರು ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಭಾರತ ಮತ್ತು ಫ್ರಾನ್ಸ್ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿರುವ ಐವನ್ ಡಿಸೋಜ ಅವರು ಕರಾವಳಿ ಕರ್ನಾಟಕದ ಪ್ರಬುದ್ಧ ರಾಜಕಾರಣಿಗಳಲ್ಲಿ ಒಬ್ಬರು. ಜನತಾ ಪಕ್ಷ, ಜನತಾ ದಳದಲ್ಲಿ ಗುರುತಿಸಿಕೊಂಡಿದ್ದು, ಬಳಿಕ ಕಾಂಗ್ರೆಸ್ ಸೇರಿ ಸಮಾಜ ಸೇವೆ ಮುಂದುವರಿಸಿರುವ ಐವನ್ ಡಿಸೋಜಾರವರು, ಈಗ ವಿಧಾನ ಪರಿಷತ್ ಸದಸ್ಯರು.
ಮಂಗಳೂರು ಮೂಲದ ಐವನ್ ಡಿಸೋಜ ಅವರನ್ನು ಎರಡನೇ ಬಾರಿಗೆ ಎಂಎಲ್ಸಿಯಾಗಿ ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದೆ. ಉಡುಪಿ ಜಿಲ್ಲೆಯ ಮುದರಂಗಡಿ ಐವನ್ ಡಿಸೋಜಾ ಇವರ ಹುಟ್ಟೂರು.
ಐವನ್ ಡಿಸೋಜ ಅವರು ಎ.ಐ.ಸಿ.ಸಿ ಸದಸ್ಯರಾಗಿ ಮತ್ತು ಎ.ಐ.ಸಿ.ಸಿ ಕಾರ್ಯದರ್ಶಿಯಾಗಿ ಕೇರಳ ರಾಜ್ಯದ ಉಸ್ತುವಾರಿಯಾಗಿ ಲೋಕಸಭಾ ಚುನಾವಣೆಗೆ 12 ರಾಜ್ಯಗಳ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ 2003ರಲ್ಲಿ ಜನತಾದಳದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. 2013ರಲ್ಲಿ ಇವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ಆಯ್ಕೆ ಮಾಡಲಾಗಿದೆ. ವಿಧಾನಸಭೆಗೂ ಅವರು ಸಮರ್ಥ ಅಭ್ಯರ್ಥಿ ಎಂದು ಕಾಂಗ್ರೆಸ್ ಪಕ್ಷ ಅಂಗೀಕರಿಸಿದೆ.
ವೃತ್ತಿಯಿಂದ ವಕೀಲರಾದ ಐವನ್ ಡಿಸೋಜ ಅವರು ಶಾಸನ ಸಭೆಯಲ್ಲಿ ಸಮರ್ಥವಾಗಿ ವಾದ ಮಂಡಿಸುತ್ತಾರೆ. ಮೊದಲ ಬಾರಿ ಎಂಎಲ್ಸಿಯಾಗಿದ್ದಾಗಲೂ ಅವರಿಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಹುದ್ದೆಯನ್ನು, ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿತ್ತು.
ಎಂಎಲ್ಸಿ ಆಗಿದ್ದಾಗ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 6 ಕೊಟಿ ರೂ.ಗೂ ಹೆಚ್ಚಿನ ಪರಿಹಾರವನ್ನು ಸಂತ್ರಸ್ತರಿಗೆ ನೀಡಲು ಕಾರಣರಾಗಿದ್ದರು. ಐವನ್‌ಗೆ “ಸದನ ವೀರ ಪ್ರಶಸ್ತಿ” ನೀಡಲಾಗಿತ್ತು. ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ, ಈಶಾನ್ಯ ರಾಜ್ಯದ ಚುನಾವಣೆ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್, ಸೆನೆಟ್ ಮತ್ತು ಅಕಾಡೆಮಿ ಕೌನ್ಸಿಲ್, ಕ್ಯಾಂಪ್ಕೋ ಲಿ., ಮ್ಯಾಕೋ ಕೋ-ಆಪರೇಟಿವ್ ಸೊಸೈಟಿ ಲಿ., ರಚನಾ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್, ದಕ್ಷಿಣ ಕನ್ನಡ ಜಿಲ್ಲಾ ಅಮೆಚ್ಯುರ್ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಮುಂತಾದ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ ಸೋಜಾ ಇವರು ಬೆಂಗಳೂರಿನಿಂದ ದಿನಾಂಕ:3.11.2025 ರಿಂದ ದಿನಾಂಕ:10.11.2025 ರವರೆಗೆ ವಿದೇಶಿ ಪ್ರವಾಸದಲ್ಲಿ ಇರುತ್ತಾರೆ ಎಂದು ಕಚೇರಿ ಪ್ರಕಟಣೆ ತಿಳಿಸಿದೆ.

