ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಸಮಿತಿಯಿಂದ ವಿನೂತನ ಕಾರ್ಯಕ್ರಮ ‘ಮಾಸದ ಸಂವಾದ ಸರಣಿ’ ಕಾರ್ಯಕ್ರಮದ ಮೊದಲ ಎಸಳು ೨೯-೧೦-೨೦೨೫ ರಂದು ಶಾರದಾ ಕಾಲೇಜಿನಲ್ಲಿ ನಡೆಯಿತು. ಕ.ಸಾ.ಪ. ಮಂಗಳೂರು ತಾಲೂಕು ಸಮಿತಿಯ ಪದಾಧಿಕಾರಿಯಾದ, ದಕ್ಷಿಣ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಚಿರಪರಿಚಿತೆ, ಶಿಕ್ಷಕಿ, ರೂವಾರಿ ಅಂತರ್ಜಾಲ ಪತ್ರಿಕೆಯ ನಿರ್ದೇಶಕಿ, ಸಾಧಕಿ ಶ್ರೀಮತಿ ರತ್ನಾವತಿ ಬೈಕಾಡಿಯವರೊಂದಿಗೆ ಸಂವಾದವನ್ನು ಏರ್ಪಡಿಸಲಾಗಿತ್ತು. ಅವರ ಸಾಧಕ ಜೀವನ ಗಾಥೆಯ ಅನಾವರಣವನ್ನು ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ ಮಾಡಿಕೊಟ್ಟರು. ರತ್ನಾವತಿಯವರ ಬದುಕಿಗೆ ಪೂರ್ಣ ಅರ್ಥವನ್ನು ನೀಡಿ ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬೆಳೆಸಿದ ಅವರ ಪತಿ ಜನಾರ್ಧನ ಬೈಕಾಡಿಯವರ ನಿಸ್ಪೃಹ ಬದುಕಿನ ಪರಿಚಯವನ್ನೂ ನೀಡಿ, ಓರ್ವ ಸಾಧಕ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾಳೆ. ಆದರೆ ಇಲ್ಲಿ ರತ್ನಾವತಿಯವರಂತಹ ಸಾಧಕಿ ಮಹಿಳೆಯ ಹಿಂದೆ ಇದ್ದವರು ಅವರ ಪತಿ ಶ್ರೀ ಜನಾರ್ಧನ ಬೈಕಾಡಿಯವರು. ಅವರಿಬ್ಬರ ದಾಂಪತ್ಯವೆಂದರೆ ಬಹಳ ಅಪರೂಪವೆನಿಸಿದ ಆದರ್ಶ ದಾಂಪತ್ಯ ಎಂದು ಹೇಳಿದರು.
 ರತ್ನಾವತಿ ಬೈಕಾಡಿ ತಮ್ಮಬದುಕಿನ ಹಳೆಯ ಪುಟಗಳನ್ನು ತಿರುವಿ ಹಾಕಿ, ತಾವು ದಾಟಿ ಬಂದ ಕಷ್ಟದ ಬದುಕನ್ನು ಸ್ಮರಣೆ ಮಾಡಿಕೊಂಡರು. ತಮ್ಮನ್ನು ಪರಿಷತ್ತು ಈ ತೆರನಾಗಿ ಸಮಾಜಕ್ಜೆ ಪರಿಚಯಿಸಿದುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಅನಂತರ ಅವರೊಂದಿಗೆ ಸಂವಾದವನ್ನು ನಡೆಸಲಾಯಿತು. ರತ್ನಾವತಿಯವರ ನೇತೃತ್ವದ ಇಂಚರ ತಂಡದವರು ಭಾಗೀತೆಗಳಗಳನ್ನು ಹಾಡಿದರು.
ಕ.ಸಾ.ಪ. ಕೇಂದ್ರ ಸಮಿತಿಯ ಡಾ. ಮಾಧವ ಎಂ.ಕೆ. ಯವರು ಕ.ಸಾ.ಪ. ಮಂಗಳೂರು ಘಟಕ ಹಮ್ಮಿಕೊಳ್ಳುತ್ತಿರುವಂತಹ ಕಾರ್ಯಕ್ರಮಗಳನ್ನು ಶ್ಲಾಘಿಸಿ ರತ್ನಾವತಿಯವರ ಸಾಧನೆಗಳಿಗೆ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದರು. ಕಸಾಪ ಮಂಗಳೂರು ಸಮಿತಿಯ ಡಾ. ಮಂಜುನಾಥ ರೇವಣಕರರು ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಸಮಿತಿಯ ಡಾ. ಅರುಣಾ ನಾಗರಾಜ್,  ಸನತ್ಕುಮಾರ್ ಜೈನ್, ಮಂಗಳೂರು ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಮುರಲಿಮೋಹನ ಚೂಂತಾರು, ಪದಾಧಿಕಾರಿಗಳಾದ  ಬೆನೆಟ್ ಅಮ್ಮನ್ನ, ಪ್ರಾಧ್ಯಾಪಕ  ರಘು ಇಡ್ಕಿದು,  ಹೊಸಮನಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು. ಇನ್ನೋರ್ವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜಿ ನಿರೂಪಣೆ ಮಾಡಿದರು.

