ದೇಗಲದ ಒಳ ಹೋಗಲು, ಹೊರ ಹೋಗಲು ಇರುವುದು ಒಂದೇ ಬಾಗಿಲೇ? ಆಂಧ್ರ ಕಾಲ್ತುಳಿತಕ್ಕೆ ಕಾರಣವೇನು?

0
32


ಆಂಧ್ರ ಪ್ರದೇಶದ :ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನವೆಂಬರ್‌ 1ರಂದು ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 12 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ.
ಶನಿವಾರ ಏಕಾದಶಿಯ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ನಿರೀಕ್ಷೆಗಿಂತ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದು ಅಪಘಾತಕ್ಕೆ ಕಾರಣವಾಯ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕಚೇರಿ,’ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದಲ್ಲಿ ಹಲವು ಮಂದಿ ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ. ಏಕಾದಶಿ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಈ ಅವಘಡ ಸಂಭವಿಸಿದೆ. ಏಕಕಾಲಕ್ಕೆ ಭಕ್ತರು ಸೇರಿದ್ದರಿಂದ ದುರಂತ ನಡೆದಿದೆ’ ಎಂದು ತಿಳಿಸಿದೆ.
ಈ ಖಾಸಗಿ ದೇವಸ್ಥಾನದ ಕೆಲಸ ಇನ್ನೂ ನಡೆಯುತ್ತಿದೆ. ಇಲ್ಲಿ ಹೊರ ಹೋಗಲು ಪ್ರತ್ಯೇಕ ಬಾಗಿಲಿಲ್ಲ. ಒಳ ಹೋಗಲು ಮತ್ತು ಹೊರ ಹೋಗಲು ಒಂದೇ ಬಾಗಿಲು ಇರುವುದು ದುರಂತ ಮುಖ್ಯ ಕಾರಣ ಎನ್ನಲಾಗಿದೆ.
ಮೂಲಗಳ ಪ್ರಕಾರ 80 ವರ್ಷದ ಮುಕುಂದ ಪಾಂಡ ಎನ್ನುವುವವರು ತಮ್ಮ ಜಾಗದಲ್ಲಿ ವೆಂಕಟೇಶ್ವರ ದೇಗುಲವನ್ನು ನಿರ್ಮಿಸಿದ್ದಾರೆ. ಕೇವಲ 4 ತಿಂಗಳ ಹಿಂದೆಯಷ್ಟೇ ಈ ದೇಗುಲ ಭಕ್ತರ ದರುಶನಕ್ಕೆ ಮುಕ್ತವಾಗಿತ್ತು. ತಿರುಮಲದ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಇದನ್ನು ನಿರ್ಮಿಸಿರುವುದರಿಂದ ಮಿನಿ ತಿರುಪತಿ ಎಂದು ಕರೆಯಲಾಗುತ್ತದೆ.
‘ಪ್ರವೇಶ ಮತ್ತು ನಿರ್ಗಮನಕ್ಕೆ ಒಂದೇ ದ್ವಾರವಿದ್ದು, ಕಿರಿದಾದ ಹಾದಿಯ ಪಕ್ಕದಲ್ಲಿ ಕಂಬಿಗಳಿವೆ. ಏಕಾದಶಿ ಪೂಜೆಗಾಗಿ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿದಾಗ ದುರಂತ ಸಂಭವಿಸಿದ್ದು ಇಲ್ಲಿಯೇ’ ಎಂದು ಸ್ಥಳೀಯರು ಹೇಳಿದ್ದಾರೆ.
ಇದರ ಜೊತೆಗೆ ಏಕಾದಶಿ ಆಚರಣೆಗೆ ಅನುಮತಿ ಪಡೆದಿರಲಿಲ್ಲ ಎನ್ನಲಾಗುತ್ತಿದೆ. ಸೂಕ್ತ ನಿರ್ವಣೆಗೆ ಸ್ವಯಂ ಸೇವಕರನ್ನ ನಿಯೋಜನೆ ಮಾಡಿಕೊಳ್ಳದೇ ಇರುವುದು. ಭಕ್ತರ ಸಂಖ್ಯೆ ಹೆಚ್ಚಿದ್ರೂ ಬಂದೋಬಸ್ತ್ ಗಾಗಿ ಪೊಲೀಸರ ಸಹಾಯ ಪಡೆಯದೇ ಇರೋದು ದುರಂತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ದೇವಸ್ಥಾನ ಆಡಳಿತ ಮಂಡಳಿ ಏಕಾದಶಿಯಂದು ಜನ ಸಂದಣಿ ಉಂಟಾಗಲಿದೆ ಎನ್ನುವ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೆ ನೀಡಿರಲಿಲ್ಲ. ಹೀಗಾಗಿ ಭಕ್ತರನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಆಂಧ್ರ ಪ್ರದೇಶದ ಸಚಿವ ಅನಮ್ ರಾಮನಾರಾಯಣ ರೆಡ್ಡಿ ಈ ಬಗ್ಗೆ ಮಾತನಾಡಿ, ದುರಂತ ಸಂಭವಿಸಿದ ದೇವಾಲಯವನ್ನು ರಾಜ್ಯ ಸರ್ಕಾರ ನಿರ್ವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.’ಈ ದೇವಾಲಯದ ಸಾಮರ್ಥ್ಯ ಕೇವಲ 2,000ರಿಂದ 3,000 ಜನರು ಮಾತ್ರ. ಶನಿವಾರ ಏಕಾದಶಿಯಾಗಿದ್ದರಿಂದ 25,000 ಜನರು ಏಕಕಾಲದಲ್ಲಿ ಆಗಮಿಸಿದರು. ಅದಕ್ಕೆ ಅನುಗುಣವಾಗಿ ವ್ಯವಸ್ಥೆಗಳನ್ನು ಮಾಡಿರಲಿಲ್ಲ. ಜತೆಗೆ ಸರ್ಕಾರಕ್ಕೆ ಮಾಹಿತಿಯನ್ನೂ ಒದಗಿಸಿರಲಿಲ್ಲ. ಅಪಘಾತಕ್ಕೆ ಇದೇ ಕಾರಣ’ಎಂದು ಎಕ್ಸ್‌ನಲ್ಲಿ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here