ಮುಡಿಪು; ‘ನಮ್ಮ ಭಾಷೆಯನ್ನು ಮೊದಲು ನಾವೇ ಪ್ರೀತಿಸೋಣ. ಭಾಷೆ ಬಳಕೆ ಆದಾಗ ಮಾತ್ರ ನಾಲಿಗೆಗೆ ಒಗ್ಗುತ್ತೆ, ಕನ್ನಡ ಭಾಷೆಯನ್ನು ಬಳಸುವ ಮೂಲಕ ರಾಜ್ಯ ಪ್ರೇಮವನ್ನು ತೋರೋಣ’ ಎಂದು ನಿವೃತ್ತ ಪ್ರಧ್ಯಾಪಕರಾದ ಪ್ರೊಫೆಸರ್ ಅಜಿತ್ ಪ್ರಸಾದ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ವಿವೇಕ ರೈ ವಿಚಾರ ವೇದಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
‘ಭಾಷೆಯನ್ನು ನಾವು ಬಹುತ್ವದ ನೆಲೆಯಲ್ಲಿ ನೋಡಬೇಕು, ಮಾತನಾಡುವಾಗ ಮೈಚಳಿ ಬಿಟ್ಟು ಮಾತನಾಡಬೇಕು’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಶ್ರೀ ರಾಜು ಮೊಗವೀರ ಅವರು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಪ್ರೊ. ಪಿ.ಎಲ್ ಧರ್ಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ವೇದಿಕೆಯಲ್ಲಿ ಮಂಗಳೂರು ವಿ.ವಿಯ ಹಣಕಾಸು ಸಚಿವ ಪಂಚಲಿಂಗ ಸ್ವಾಮಿ, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರ ಪ್ರೊ. ನಾಗಪ್ಪ ಗೌಡ ಉಪಸ್ಥಿತರಿದ್ದರು. ಪ್ರೊ.ಸೋಮಣ್ಣ ಹೊಂಗಳ್ಳಿ ಸ್ವಾಗತಿಸಿ, ಡಾ. ಧನಂಜಯ ಕುಂಬ್ಳೆ ವಂದಿಸಿದರು. ಡಾ. ಯಶುಕುಮಾರ್ ಡಿ ನಿರೂಪಿಸಿದರು.

