ಉಡುಪಿ: ಧರ್ಮಸ್ಥಳದ ಧಮಾರ್ಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನ.7ರಂದು ಸಾಯಂಕಾಲ 4.30ಕ್ಕೆ ಸೋದೆ ಮಠದ ಬಳಿಯ ವಿದ್ಯೋದಯ ಪಿ.ಯು ಕಾಲೇಜು ಸಭಾಂಗಣದಲ್ಲಿ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ಶಿರೂರು ಮಠದ ದಿವಾನ್ ಡಾ. ಉದಯಕುಮಾರ್ ಸರಳತ್ತಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶೀರೂರು ಪರ್ಯಾಯ ನಮ್ಮ ಪರ್ಯಾಯ” ಎಂಬ ಧೈಯವಾಕ್ಯದೊಂದಿಗೆ ಜಿಲ್ಲೆಯ ಪ್ರತಿ ಮನೆಗಳಿಗೂ ಆಮಂತ್ರಣ ಪತ್ರಿಕೆಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಪರ್ಯಾಯ ಪೂರ್ವಭಾವಿಯಾಗಿ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಸಂಪನ್ನಗೊಂಡಿದ್ದು, ಕೊನೆಯದಾದ ಧಾನ್ಯ ಮುಹೂರ್ತ ಡಿ. 14 ರಂದು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಶಾಸಕ ಮಾತನಾಡಿ ಯಶ್ ಪಾಲ್ ಎ.ಸುವರ್ಣ, ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ನಡೆಸಲಾಗುವುದು. 10 ಕೋಟಿ ರೂ. ವೆಚ್ಚದಲ್ಲಿ ನಗರದ ರಸ್ತೆಗಳ ದುರಸ್ತಿಗೆ ಈಗಾಗಲೇ ಟೆಂಡರ್ ಕರೆಯಲಾಗುತ್ತಿದ್ದು, ಡಿಸೆಂಬರ್ ಒಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು
ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಪರ್ಯಾಯ ಪೀಠಾರೋಹಣಗೈಯಲಿರುವ ಶ್ರೀಪಾದರು ಜ. 9ರಂದು ಪುರಪ್ರವೇಶಗೈಯಲಿದ್ದು, ಸಾಯಂಕಾಲ 3:30ಕ್ಕೆ ಕಡಿಯಾಳಿಯಲ್ಲಿ ಶ್ರೀಪಾದರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ ಕರೆತರಲಾಗುವುದು. ನಂತರ ನಗರ ಸಭೆ ವತಿಯಿಂದ ಭಾವೀ ಪರ್ಯಾಯ ಶ್ರೀಗಳವರಿಗೆ ರಥಬೀದಿಯಲ್ಲಿ ಪೌರ ಸಮ್ಮಾನ ನಡೆಯಲಿದೆ. ಜನವರಿ 10ರಿಂದ 17ರವರೆಗೆ ದಿನಂಪ್ರತಿ ಅದ್ದೂರಿಯ ಹೊರೆ ಕಾಣಿಕೆಯ ಮೆರವಣಿಗೆ ನಡೆಯಲಿದೆ. ಹೊರಕಾಣಿಕೆಯಲ್ಲಿ ಬಂದ ಎಲ್ಲಾ ಪರಿಕರಗಳನ್ನು ಶ್ರೀಮಠದ ವಾಹನ ನಿಲುಗಡೆ ಸಮೀಪ ( ರಾಜಾಂಗಣ ಪಾರ್ಕಿಂಗ್) ಅಚ್ಚುಕಟ್ಟಾಗಿ ಜೋಡಿಸಿ, ವಸ್ತು ಪ್ರದರ್ಶನ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದರು.
ಹೊರೆಕಾಣಿಕೆ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಮೋಹನ ಭಟ್, ನಗರಸಭೆ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಉಪಸ್ಥಿತರಿದ್ದರು.

