ಮೂಡುಬಿದಿರೆ ಪುರಸಭೆ “ಇನ್ನೊಬ್ಬರ ಹೆಗಲ ಮೇಲೆ ಪಿಸ್ತೂಲಿಟ್ಟು ಗುಂಡು ಹೊಡೆಯುವುದು ಬೇಡ”- ಕೊರಗಪ್ಪ

ಮೂಡುಬಿದಿರೆ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕ ಕರಿಂಜೆ ಗ್ರಾಮದಲ್ಲಿ ಕೆಲಸ ಮಾಡುತ್ತಿದೆ. ಪುರಸಭೆಯ ಪರಿಸರ ಅಭಿಯಂತರರಾದ ಶಿಲ್ಪಾ ಮೇಡಂ ನೀವು ಎಷ್ಟು ಬಾರಿ ಘನತ್ಯಾಜ್ಯಕ್ಕೆ ಭೇಟಿ ನೀಡಿದ್ದೀರಿ?, ಅಲ್ಲಿಯ ಯಾವುದಾದರೂ ಉಪಕರಣಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ? ಎಷ್ಟು ಬಾರಿ ಪುರಸಭೆಯ ಸಭೆಗೆ ಮಾಹಿತಿಯನ್ನು ನೀಡಿರುತ್ತೀರಿ?, ಅಲ್ಲಿ ನೀರು ಸರಬರಾಜಿನ ವ್ಯವಸ್ಥೆ ಸರಿಯಾಗಿದೆಯೇ?, ಅಲ್ಲಿಯ ಜೆಸಿಬಿ ಹಾಳಾಗಿ ಎಷ್ಟು ಸಮಯವಾಯಿತು ತಿಳಿದಿದೆಯೇ? ಇತ್ಯಾದಿ ಹಲವಾರು ಪ್ರಶ್ನೆಗಳಿಗೆ ಪರಿಸರ ಅಭಿಯಂತರವಾದ ಶಿಲ್ಪಾ ಮೇಡಂ ನಿರುತ್ತರರಾದರು. ಪುರಸಭೆಯ ಉಪಾಧ್ಯಕ್ಷನಾದ ತಪ್ಪಿಗೆ ಆ ಎಲ್ಲಾ ಪ್ರಯತ್ನಗಳನ್ನು ನಾನು ಮಾಡಬೇಕಾಯಿತು ಸ್ವತಹ ನಿಮ್ಮಿಂದ ಆಗಬೇಕಾಗಿದ್ದ ಈ ಎಲ್ಲ ಕೆಲಸಗಳು ನಾನು ಮಾಡಬೇಕಾಯಿತು ಎಂದು ನೇರವಾಗಿ ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿಯವರು ಸಭೆಯ ನಡುವೆ ಆಪಾದಿಸಿದರು.
ಯಾವುದೋ ಪುರಸಭೆಯಲ್ಲಿ ಅಧಿಕಾರಿಯೊಬ್ಬರು ಡೆತ್ ನೋಟ್ ಬರೆದಿಟ್ಟದ್ದನ್ನು ನನಗೆ ಕಳುಹಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದೀರಿ ಎಂದು ನೇರವಾಗಿ ಆಪಾದನೆ ಗೈದರು. ಶಿಲ್ಪ ಅವರು ನೀಡಿದ ಉಡಾಫೆ ಉತ್ತರಕ್ಕೆ ತಕ್ಷಣ ಪ್ರತಿಕ್ರಿಯಿಸಿದ ನಾಗರಾಜರು ನಾನು ಯಾವತ್ತಾದರೂ, ಯಾರಿಗಾದರೂ ಗದರಿಸಿದಿದ್ದಲ್ಲಿ ತಿಳಿಸಿ ಎಂದಾ ಕ್ಷಣ ಅವರು ಹೇಳಿದ ವ್ಯಕ್ತಿಗೆ ಮುಖ್ಯಾಧಿಕಾರಿಯ ಮೂಲಕ ಫೋನ್ ಮಾಡಿಸಿ ಸ್ಪಷ್ಟೀಕರಣವನ್ನು ಕೇಳಿದಾಗ ಸುಳ್ಳು ಎನ್ನುವುದು ಇಡೀ ಸಭೆಗೆ ಸಾಬೀತಾಯಿತು.
ಸದಸ್ಯರುಗಳಾದ ಸುಜಾತ, ಮಮತಾ ಅವರುಗಳು ರಾಜಕಾಲುವೆಯ ಅತಿಕ್ರಮಣಗಳ ಬಗ್ಗೆ ಕ್ರಿಯಾ ಲೋಪ ಎತ್ತಿದಾಗ ಜಫರ್ ಜೋನ್ ವಿಚಾರ ಪ್ರಸ್ತಾಪಿಸುತ್ತಾ ಮೇಲ್ಕಂಡ ಎಲ್ಲ ವಿಷಯಗಳನ್ನು ಉಪಾಧ್ಯಕ್ಷರು ಸಭೆಯ ಮುಂದೆ ಪ್ರಸ್ತುತಪಡಿಸಿದ್ದರು.

ಮೇಲಿನ ಘಟನೆಗೆ ಕಾರಣವಾದುದು ಸಭೆಯ ಹಾಗೂ ಸದಸ್ಯರ ತಿಳುವಳಿಕೆಗೆ ಬರದೆ ಎಂಆರ್‌ಎಫ್ ಘಟಕವನ್ನು ಸಹಸ್ ಎನ್ ಜಿ ಓ ಸಂಸ್ಥೆಯ ಮೂಲಕ ಸ್ಥಾಪಿಸಲು ಮುಂದಾದ ಶಿಲ್ಪ ಅವರ ಕ್ರಮಕ್ಕೆ ತಿರುಗೇಟಾಗಿ ಪರಿಣಮಿಸಿತು.
ಹೊಸಬೆಟ್ಟು ಆಳ್ವಾಸ್ ನಡುವಿನ ರಸ್ತೆಯಲ್ಲಿ ಬರುವ ಏದಾಡಿ ಗುತ್ತು ಪ್ರದೇಶದಲ್ಲಿ ಸುಮಾರು 200ರಷ್ಟು ಮನೆಗಳು ಕಟ್ಟಲ್ಪಟ್ಟಿವೆ. ಈ ಪ್ರದೇಶಕ್ಕೆ ತೆರಳುವುದಕ್ಕೆ ಮುಖ್ಯರಸ್ತೆಯಿಂದ ಸರಿಯಾದ ಅಗಲವಾದ ಮಾರ್ಗದ ಸೌಕರ್ಯವಿಲ್ಲದೆ, ಅಗಲಕಿರಿದಾದ ರಸ್ತೆಯಲ್ಲಿ ಪ್ರವೇಶಿಸಬೇಕಾಗಿದೆ. ಇಂತಹ ಪ್ರದೇಶದಲ್ಲಿರುವ ಮನೆಗಳವರು ನಮ್ಮನ್ನು ಕೇಳುತ್ತಿದ್ದಾರೆ ಎಂದು ದಿವ್ಯ ಜಗದೀಶ್, ಕೊರಗಪ್ಪ, ರಾಜೇಶ್ ನಾಯ್ಕ ಇತ್ಯಾದಿಯರು ಪ್ರಶ್ನಿಸಿದಾಗ ಇನ್ನು ಮುಂದೆ ಅಲ್ಲಿ ಯಾವುದೇ ಮನೆಗಳಿಗೆ ಪುರಸಭೆ ಪರವಾನಿಗೆಯನ್ನು ನೀಡಬಾರದು. ಆ ಸ್ಥಳವನ್ನು ಅಭಿವೃದ್ಧಿ ಮಾಡುವ ಜವಾಬ್ದಾರಿ, ರಸ್ತೆ ,ನೀರು, ದಾರಿದೀಪ ಇತ್ಯಾದಿ ಎಲ್ಲವನ್ನು ಪೂರೈಸಿ ಕೊಡಬೇಕಾದದ್ದು ಸಂಬಂಧ ಪಟ್ಟ ಬಿಲ್ಡರ್ ಅವರದಾಗಿರುತ್ತದೆ. ಇನ್ನು ಮುಂದೆ ಯಾವುದೇ ಮನೆಗೆ ಲೈಸೆನ್ಸ್ ಕೊಡುವುದಿದ್ದಲ್ಲಿಯೂ ಈ ಹಿಂದೆ ಮಾಡಿದ ಅರೆಬರೆ ಕಾಮಗಾರಿಗಳನ್ನು ಪೂರೈಸಿದ ತರುವಾಯವೇ ನೀಡಬೇಕು ಎಂದು ಪಕ್ಷ ಭೇದ ಮರೆತು ನಿರ್ಣಯವನ್ನು ಕೈಗೊಳ್ಳಲಾಯಿತು. ಹಾಗೂ ಸಂಬಂಧಪಟ್ಟ ನಿರ್ಣಯವನ್ನು ಜಾರಿಗೆ ತರಲು ಮುಖ್ಯಾಧಿಕಾರಿಗೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಾಯಿತು .
ಸುರೇಶ್ ಕೋಟ್ಯಾನ್, ಪಿಕೆ ತೋಮಸ್, ಕೊರಗಪ್ಪ, ಪ್ರಸಾದ್ ಕುಮಾರ್, ನವೀನ್ ಶೆಟ್ಟಿ ಅವರು ಮೂರೂ ರಾಜಕಾಲುವೆಯ ಒತ್ತುವರಿಗಳನ್ನು , ಬಿ ಇ ಓ ಕಚೇರಿಯ ಬಳಿಯ ಒತ್ತುವರಿಯನ್ನು, ನಿವಾರಿಸಿ ಸಮರ್ಪಕಗೊಳಿಸುವ ಜವಾಬ್ದಾರಿಯನ್ನು ಮುಖ್ಯಾಧಿಕಾರಿಗಳಿಗೆ ವಹಿಸಿ ನಿರ್ಣಯಿಸಲಾಯಿತು.

ಕಳೆದ ಆರು ತಿಂಗಳಿಂದ ಸದಸ್ಯೆ ಮಮತಾ ಅವರು ಪ್ರಶ್ನಿಸುತ್ತಿದ್ದ ನೀರಿನ ಲಭ್ಯತೆ ಪರಿಹಾರ ಆಗದೆ ಇರುವುದನ್ನು ಮತ್ತೊಮ್ಮೆ ಪ್ರಸ್ತಾಪಿಸಿ ಆದಷ್ಟು ಬೇಗ ಬೋರ್ವೆಲ್ಗಳಿಗೆ ಕನೆಕ್ಷನ್ ಅನ್ನು ಕೊಡುವ ಮೂಲಕ ನೀರಿನ ಅಗತ್ಯವನ್ನು ಪೂರೈಸಬೇಕೆಂದು ಕೇಳಿಕೊಂಡಾಗ ಸದಸ್ಯರುಗಳಾದ ಪ್ರಸಾದ್ ಕುಮಾರ್, ಕೊರಗಪ್ಪ ,ಸುರೇಶ್ ಕೋಟ್ಯಾನ್ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಪಿಕೆ ತೋಮಸ್ ಅವರು ಪ್ರಸ್ತಾಪಿಸಿದ ನಾಯಿಗಳಿಗೆ ಟ್ಯಾಗ್ ಹಾಕುವ ವಿಚಾರ ಸೂಕ್ತವೆಂದು ಹೇಳಿ ಬೀದಿನಾಯಿಗಳ ನಿಯಂತ್ರಣ ಸಾಧ್ಯ ಇದೆ ಎನ್ನುವುದು ಒಪ್ಪಿತವಾಯಿತು.
ಇದೇ ಸಂದರ್ಭದಲ್ಲಿ ಮೂಡುಬಿದಿರೆಯ ಸರಕಾರಿ ಶಾಲೆ, ಮುರಾರ್ಜಿ ದೇಸಾಯಿ ವಸತಿ ಶಾಲೆ ನೋ ವೇಸ್ಟ್ ಕ್ಯಾಂಪಸ್ ಹೊಂದಿರುವ ಪ್ರಥಮ ಶಾಲೆಯಾಗಿ ಮೂಡಿಬಂದಿರುವುದಕ್ಕೆ ಪ್ರಾಂಶುಪಾಲ ಚನ್ನಬಸಯ್ಯ ಹಿರೇಮಠ, ವಿವೇಕ್ ಪಡಿವಾಳ, ಸರಿತಾ, ಗಣೇಶ್ ಕೆ ಪಿ ಅವುಗಳನ್ನು ಗೌರವಿಸಲಾಯಿತು.
ಪುರಸಭೆಯ ಸೋಶಿಯಲ್ ಮೀಡಿಯವನ್ನು ನಿರ್ವಹಣೆ ಮಾಡಲು ರೀ ಟೆಂಡರ್ ಕರೆಯಲು, ಸಿಡಿಲು ನಿಯಂತ್ರಕ ಇಂಡಸ್ಟ್ರಿಯಲ್ ಪ್ಲಗ್ ಹಾಕಿಸಲು, ರುದ್ರ ಭೂಮಿಯ ಸರಿಪಡಿಸುವಿಕೆಗೆ, ಅಗತ್ಯ ಇರುವಲ್ಲಿ ಮೋರಿಗೆ ಹೆಚ್ಚುವರಿ ಸಿಮೆಂಟ್ ಪೈಪ್ ಅಳವಡಿಸಲು, ಅಗತ್ಯ ಇರುವಲ್ಲಿ ವಿದ್ಯುತ್ ದೀಪ ಅಳವಡಿಸಲು, ಕನಿಷ್ಠ ಶುಲ್ಕದೊಂದಿಗೆ ವಾಸ ಯೋಗ್ಯ ಬಳಕೆ ಪ್ರಮಾಣ ಪತ್ರವನ್ನು ನೀಡಲು, ಇತ್ಯಾದಿ ಅಗತ್ಯ ಕಾಮಗಾರಿಯನ್ನು ನಡೆಸಲು, ಪುರಸಭಾ ಸತ್ತುಗಳಿಗೆ ಹಾಳಾಗದಂತೆ ಕಾರ್ಯಗಳನ್ನು ಕೈಗೊಳ್ಳಲು ನಿರ್ಣಯಿಸಲಾಯಿತು.
ವರದಿ ರಾಯಿ ರಾಜ ಕುಮಾರ

