ಕಡಬ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಮಹೋತ್ಸವ ಹಾಗೂ ರಥೋತ್ಸವ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ದರ್ಶನ್ ಅವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ನಡೆಯಿತು.
ಬ್ರಹ್ಮರಥೋತ್ಸವದ ವೇಳೆ ಯಾವುದೇ ಗೊಂದಲ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು, ರಥ ಎಳೆಯಲು ಪಾಸ್ ವಿತರಣೆ ಮಾನದಂಡದ ಪ್ರಕಾರ ಇರಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಎಸ್ಪಿ ಡಾ. ಅರುಣ್ ಹೆಚ್ಚುವರಿ ಸಿಸಿ ಕ್ಯಾಮೆರಾ ಅಳವಡಿಕೆ, ಪಾರ್ಕಿಂಗ್ ವ್ಯವಸ್ಥೆ ಸುಧಾರಣೆ ಹಾಗೂ ಸ್ವಯಂಸೇವಕರ ಸಹಕಾರದ ಕುರಿತು ನಿರ್ದೇಶಿಸಿದರು. ಭಕ್ತರ ಉರುಳು ಸೇವೆ, ಎಡೆಸ್ನಾನ ಸೇವೆ ಹಾಗೂ ಭೋಜನ ಪ್ರಸಾದ ವಿತರಣೆ ಕುರಿತ ಚರ್ಚೆಯೂ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ, ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ತಹಶೀಲ್ದಾರ್ ಪ್ರಭಾಕರ ಖಜೂರೆ, ಎಸ್ಪಿ ಡಾ. ಅರುಣ್, ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ವಿವಿಧ ಅಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡರು.
ಸಭೆಯ ಅಂತ್ಯದಲ್ಲಿ ಅಧ್ಯಕ್ಷತೆ ಕುರಿತಾಗಿ ಚರ್ಚೆ ನಡೆಯಿತು. ಸಭಾ ನೋಟೀಸಿನಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆ ಉಲ್ಲೇಖಿತವಾಗಿದ್ದರೂ ಸಭೆಯ ನೇತೃತ್ವ ಜಿಲ್ಲಾಧಿಕಾರಿ ವಹಿಸಿದ್ದರು. ಈ ಕುರಿತು ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ “ಪೂರ್ವಭಾವಿ ಸಭೆಗೆ ಪ್ರೋಟೋಕಾಲ್ ಇಲ್ಲ, ಸ್ಥಳೀಯ ಆಡಳಿತ ನಿರ್ಧಾರವೇ ಅಂತಿಮ” ಎಂದು ಹೇಳಿದರು.

