ವರದಿ ರಾಯಿ ರಾಜ ಕುಮಾರ
ಕಲ್ಲಬೆಟ್ಟಿನ ಕಲ್ಲಿನ ಮೇಲೆ ವಿದ್ಯಾ ಕುಸುಮವನ್ನು ಅರಳಿಸಿದ ಯುವರಾಜರ ಸ್ತುತ್ಯ ಕಾರ್ಯವನ್ನು ಮೆಚ್ಚಬೇಕು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ, ವಿಶ್ಲೇಷಿಸುವ, ಸಮಾಜಮುಖಿ ಕೆಲಸ ಮಾಡುವ, ಗುಣಗಳನ್ನು ಬೆಳೆಸಿ ಯಶಸ್ಸನ್ನು ಸಾಧಿಸಲು ಪ್ರೇರೇಪಿಸಬೇಕು. ಉತ್ತಮ ಕಲಿಕೆಯೇ ಗೆಲುವಿನ ಮೂಲ ಮಂತ್ರ ಎಂದು ಸ್ವಾಮಿ ವಿವೇಕಾನಂದ ಹಾಗೂ ಎಪಿಜೆ ಅಬ್ದುಲ್ ಕಲಾಂ ಅವರ ಹಲವಾರು ಮಾತುಗಳನ್ನು ಉದ್ದರಿಸಿದರು.

ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಾಧೀಶ, ಹಾಲಿ ಆಂಧ್ರಪ್ರದೇಶದ ಗವರ್ನರ್ ಎಸ್ ಅಬ್ದುಲ್ ನಜೀರ್ ಅವರು ನವೆಂಬರ್ 7ರಂದು ಮೂಡುಬಿದರೆ ಎಕ್ಸಲೆಂಟ್ ಸಂಸ್ಥೆಯ ಶೈಕ್ಷಣಿಕ ಕಟ್ಟಡವನ್ನು ಉದ್ಘಾಟಿಸಿ ಮೇಲಿನಂತೆ ಮಾತನಾಡಿದ್ದರು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸುಬ್ರಮಣ್ಯ ಮಠಾಧೀಶ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದು ಉತ್ತಮ ಸಂಸ್ಕಾರ, ಉತ್ತಮ ಗುಣನಡತೆ, ಉತ್ತಮ ಆಚಾರ ವಿಚಾರಗಳನ್ನು ಪ್ರತಿ ಹಂತದಲ್ಲಿಯೂ ಹೇಳಿ ಕೊಡಬೇಕಾಗುತ್ತದೆ. ಆಗಲೇ ಆತನ ಬದುಕು ಸೂಕ್ತ ದಾರಿಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದರು. ಅಂತಹ ಸಂಸ್ಕಾರಗಳು ಎಕ್ಸಲೆಂಟ್ ಸಂಸ್ಥೆಯಲ್ಲಿ ದೊರಕುತ್ತಿರುವುದು ಭಾರತೀಯ ಪರಂಪರೆಗೆ ಮುಕುಟ ಪ್ರಾಯವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳಾಡಿದರು. ಗೌರವಾಧ್ಯಕ್ಷ, ಮಾಜಿ ಸಚಿವ ಕೆ ಅಭಯ್ ಚಂದ್ರ ಜೈನ್, ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.
.

