ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಪೆಟ್ರೋಲ್ ಬಂಕ್ ಜಂಕ್ಷನ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಹೆದ್ದಾರಿ ಬದಿಯ ಡಿವೈಡರ್ ಗೆ ಅಳವಡಿಸಿದ್ದ ಕಬ್ಬಿಣದ ತಡೆಬೇಲಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು ಚಾಲಕ ಉಜಿರೆ ನಿವಾಸಿ ಪ್ರಶಾಂತ್ ಎಂಬವರು ಪವಾಡಸದೃಶ ಪಾರಾಗಿದ್ದಾರೆ.
ಮಂಗಳೂರಿನಿಂದ ಬೆಳ್ಮಣ್ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿಯ ಜಂಕ್ಷನ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೀದಾ ಬಲಬದಿಗೆ ಬಂದು ಸಿಗ್ನಲ್ ಲೈಟ್ ಗೆ ಹಾಗೂ ಡಿವೈಡರ್ ನಲ್ಲಿ ಅಳವಡಿಸಿರುವ ಕಬ್ಬಿಣದ ತಡೆಬೇಲಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಟಿಪ್ಪರ್ ನ ಎದುರು ಭಾಗದ ಎರಡು ಚಕ್ರಗಳು, ಡಿಸೀಲ್ ಟ್ಯಾಂಕ್ ಕಿತ್ತು ಹೋಗಿದ್ದು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತದಿಂದ ಹೆದ್ದಾರಿ ಬದಿಯ ಸಿಗ್ನಲ್ ಲೈಟ್ ಗೆ ಕೂಡ ಹಾನಿಯಾಗಿದೆ.

ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಉಂಟಾಯಿತು. ಕೂಡಲೇ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಹೆದ್ದಾರಿ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕ್ರೇನ್ ಮೂಲಕ ಟಿಪ್ಪರನ್ನು ಸ್ಥಳದಿಂದ ತೆರವುಗೊಳಿಸಲಾಯಿತು. ಅಪಘಾತಕ್ಕೆ ಟಿಪ್ಪರ್ ಚಾಲಕನ ಅತಿ ವೇಗದ ಚಾಲನೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

