7 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಕಾನ್ಸ್‌ಟೇಬಲ್ ಬಂಧನ, ಪೊಲೀಸಪ್ಪನೇ ಮಾಸ್ಟರ್‌ಮೈಂಡ್

0
24

ಬೆಂಗಳೂರು: ಬೆಂಗಳೂರಿನಲ್ಲಿ  7 ಕೋಟಿ ರೂ. ದರೋಡೆ ಪ್ರಕರಣ ಸಂಬಂಧ ದರೋಡೆಕೋರರ ಹೆಡೆಮುರಿ ಕಟ್ಟಲು ಗೃಹ ಸಚಿವ ಡಾ. ಜಿ. ಪರಮೇಶ್ವರ ಕೊಟ್ಟಿದ್ದ 24 ಗಂಟೆಯ ಗಡುವು ಮುಗಿದಿದೆ. ಆದರೆ, ಈವರೆಗೆ ದರೋಡೆಕೋರರ ಸುಳಿವು ಮಾತ್ರ ಸಿಕ್ಕಿದೆ. ಆರೋಪಿಗಳ ಫೋಟೋ ಬಿಡುಗಡೆ ಮಾಡಲಾಗಿದೆ. ಆದರೆ, ಹಣ ದೋಚಿದವರು ಎಲ್ಲಿಗೆ ಹೋಗಿದ್ದಾರೆ? ಹಣ ಎಲ್ಲಿದೆ ಎಂಬುದು ಮಾತ್ರ ಪತ್ತೆಯಾಗಿಲ್ಲ. ಪೊಲೀಸರು ದರೋಡೆ ಕೇಸ್‌ ಸಂಬಂಧ ಒಬ್ಬೊಬ್ಬರಾಗಿ ಶಂಕಿತರನ್ನು ಬಂಧಿಸುತ್ತಿದ್ದಾರೆ. ಈ ಮಧ್ಯೆ, ಈ ಪ್ರಕರಣದ ದಿಕ್ಕನ್ನೇ ಬದಲಿಸುವಂಥ ರೋಚಕ ಬೆಳವಣಿಗೆ ನಡೆದಿದೆ. ಇಡೀ ದರೋಡೆಯ ಮಾಸ್ಟರ್‌ಮೈಂಡ್ ಓರ್ವ ಪೊಲೀಸ್ ಕಾನ್ಸ್‌ಟೇಬಲ್ಎಂಬ ಶಂಕೆ ವ್ಯಕ್ತವಾಗಿದೆ.

ದರೋಡೆ ಪ್ರಕರಣ ಸಂಬಂಧ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಎಂಬವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ನಾಯ್ಕ್ ಇಡೀ ದರೋಡೆಯ ಮಾಸ್ಟರ್‌ಮೈಂಡ್ ಎನ್ನಲಾಗುತ್ತಿದೆ. ಇವರೇ ಹುಡುಗರನ್ನ ದರೋಡೆಗೆ ಸಿದ್ಧಪಡಿಸಿದ್ದರು ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ಗ್ಯಾಂಗ್ ರೆಡಿ ಮಾಡಿದ್ದ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್, ದರೋಡೆ ಕುರಿತು ಪಕ್ಕಾ ತರಬೇತಿ ನೀಡಿದ್ದರು. ಹೇಗೆ ರಾಬರಿ ಮಾಡಬೇಕು? ಹೇಗೆ ತಪ್ಪಿಸಿಕೊಳ್ಳಬೇಕೆಂದು ಟ್ರೈನಿಂಗ್ ಕೂಡ ಕೊಟ್ಟಿದ್ದರು. ಪೊಲೀಸರು ಹೇಗೆ ಕೆಲಸ ಮಾಡುತ್ತಾರೆಂದು ಸಹ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ತಂಡವೇ 7.11 ಕೋಟಿ ರೂ. ದರೋಡೆ ಮಾಡಿದೆ. ಅಲ್ಲದೆ ಸಿಎಂಎಸ್ ಸೆಕ್ಯೂರಿಟಿ ಎಜೆನ್ಸಿಯ ಮಾಜಿ ಉದ್ಯೋಗಿಗಳು ದರೋಡೆಗೆ ಸಾಥ್ ಕೊಟ್ಟಿದ್ದು, ಕದ್ದ ಹಣವನ್ನು ಬೆಂಗಳೂರಲ್ಲಿಯೇ ಬಚ್ಚಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ದರೋಡೆಕೋರರ ಪತ್ತೆಗೆ ನಾಲ್ವರು ಜಂಟಿ ಪೊಲೀಸ್ ಆಯುಕ್ತರು, 18 ಡಿಸಿಪಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಇನ್ನೋವಾ ಕಾರು ಗುರುವಾರ ತಿರುಪತಿಯಲ್ಲಿ ಸಿಕ್ಕಿದೆ. ಅಲ್ಲದೇ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಮಧ್ಯೆ ಸಿದ್ದಾಪುರ ಪೊಲೀಸರು ಡೇವಿಡ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದರೋಡೆ ಕೃತ್ಯದಲ್ಲಿ ಶಾಮೀಲಾಗಿದ್ದ ವಿಜಯ್ ಬಳಿ ಇದ್ದದ್ದು ಇದೇ ಡೇವಿಡ್‌ನ ಬೈಕ್‌ ಎನ್ನಲಾಗಿದೆ. ಡೇವಿಡ್‌ನಿಂದ ಬೈಕ್‌ಪಡೆದಿದ್ದ ವಿಜಯ್ ಎಂಬಾತ ಮತ್ತೊಬ್ಬ ವಿಜಯ್ ಅನ್ನೋನಿಗೆ ಬೈಕ್ ನೀಡಿದ್ದ.

ಸಿಎಂಎಸ್​ ವಾಹನದಿಂದ ಇನ್ನೋವಾಗೆ ಹಣ ಶಿಫ್ಟ್ ಮಾಡಿದ್ದ ದರೋಡೆಕೋರರು, ನಕಲಿ ನಂಬರ್ ಪ್ಲೇಟ್​ ಬಳಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಆ ನಂಬರ್ ಮೂಲಕ ಕೆದಕಿದಾಗ ಬೆಂಗಳೂರಿದ್ದೇ ಸ್ವಿಫ್ಟ್ ಕಾರು ಪತ್ತೆ ಆಗಿದೆ.

ಏನೇ ಇರಲಿ, ದೇಶಾದ್ಯಂತ ಸದ್ದು ಮಾಡಿರುವ ದರೋಡೆ ಪ್ರಕರಣದಲ್ಲಿ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಬಲೆಗೆ ಬಿದ್ದಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಸದ್ಯ ಆರೋಪಿಗಳು ಬೇರೆ ರಾಜ್ಯಕ್ಕೆ ಎಸ್ಕೇಪ್ ಆಗಿರೋದು ಖಚಿತವಾಗಿದೆ. ದರೋಡೆಕೋರರ ತಂಡ ಸೆರೆಸಿಕ್ಕ ಬಳಿಕವಷ್ಟೇ ಇದರ ಹಿಂದಿರುವ ಸೂತ್ರದಾರರು ಎಂಬುದು ಸ್ಪಷ್ಟವಾಗಲಿದೆ.

LEAVE A REPLY

Please enter your comment!
Please enter your name here