ಉಡುಪಿ: ರಾಜ್ಯದಲ್ಲಿ ಎರಡು ತಿಂಗಳಿಂದ ಆಡಳಿತ ನಡೆಯುತ್ತಿಲ್ಲ. ಶಾಸನ ಇಲ್ಲದ ದುಶ್ಯಾಸನ ಆಡಳಿತವಿದೆ. ಶೇ.90ರಷ್ಟು ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ಮುಖ್ಯಮಂತ್ರಿ ಮೈಸೂರಿಗೆ- ಉಪಮುಖ್ಯಮಂತ್ರಿ ದೆಹಲಿಗೆ ಸೀಮಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ರ್ನಿಣಯ ಮಂಡಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಮಾಜಿ ಸಚಿವ, ಶಾಸಕ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ನಡುವೆ ವಿಶ್ವಾಸವಿಲ್ಲ. ಹೀಗಾಗಿ ಸದನದಲ್ಲಿ ವಿಶ್ವಾಸ ಮತ ಯಾಚಿಸಲು ಸೂಚಿಸುತ್ತೇವೆ. ಎನ್ಡಿಎ ಒಕ್ಕೂಟದಲ್ಲೂ ಕೂಡ ಈ ಬಗ್ಗೆ ಮಾತುಕತೆ ಮಾಡುತ್ತೇವೆ ಎಂದರು.
ಬಿಜೆಪಿ ಯಾವುದೇ ಕಾರಣಕ್ಕೂ ಸರ್ಕಾರ ರಚನೆ ಮಾಡಲು ಮುಂದಾಗುವುದಿಲ್ಲ. ನಾವು ಚುನಾವಣೆಗೆ ಹೋಗುತ್ತೇವೆ. ಕಾಂಗ್ರೆಸ್ ತನ್ನ ಭಾರದಿಂದಲೇ ಕುಸಿದು ಬೀಳಲೆಂದು ಕಾದು ನೋಡುತ್ತಿದ್ದೇವೆ ಎಂದು ತಿಳಿಸಿದರು.
ಮೋದಿ ಪಾಂಚಜನ್ಯ
ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಉತ್ಸಾಹದ ಸಿದ್ಧತೆ ನಡೆದಿದೆ. ರಾಮಮಂದಿರದಲ್ಲಿ ರಾಮಧ್ವಜವನ್ನು ಮೋದಿ ಹಾರಿಸಿದ್ದಾರೆ. ಕೃಷ್ಣಮಠದಲ್ಲಿ ಪಾಂಚಜನ್ಯ ಊದಲಿದ್ದಾರೆ. ಭಗವದ್ಗೀತೆ ಸಮಾವೇಶ ದೇಶದ ಸಾಂಸತಿಕ ಧಾರ್ಮಿಕ ವಾತಾವರಣ ನಿಮಾರ್ಣ ಮಾಡಲಿದೆ. ರಾಜ್ಯಪಾಲ ಗೆಹಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದರು.
