ಡೆಂಟಲ್ ಸ್ಕ್ಯಾನರ್/ಸ್ಕ್ಯಾನಿಂಗ್

0
12

ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರ ಮತ್ತು ಸಂಶೋಧನೆ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಇಂತಹ ಆವಿಷ್ಕಾರಕ್ಕೆ ಹೊಸತಾಗಿ ಸೇರ್ಪಡೆಗೊಂಡಿರುವ ಸಾಧನ ಅಥವಾ ಸಲಕರಣೆ ಎಂದರೆ ಡೆಂಟಲ್ ಸ್ಕ್ಯಾನಿಂಗ್ ಉಪಕರಣ ಆಗಿರುತ್ತವೆ. ಇದೊಂದು ನೂತನ ಸಂಶೋಧನೆಯಾಗಿದ್ದು, ದಂತ ಸಂಬಂಧಿ ರೋಗಗಳ ಪತ್ತೆ ಹಚ್ಚುವಿಕೆ, ದಂತ ರೋಗಿಗಳಿಗೆ ರೋಗದ ಬಗ್ಗೆ ಅರಿವು ಮೂಡಿಸುವಿಕೆ ಮತ್ತು ಡಿಜಿಟಲ್ ದಂತ ಅಳತೆ ಅಥವಾ ಇಂಪ್ರೆಷನ್ ತೆಗೆಯಲು ಬಹಳ ಉಪಯುಕ್ತ ಮತ್ತು ನಿಖರವಾಗಿ ದಾಖಲಿಸಲು ಸಹಕಾರಿಯಾಗಿದೆ.

ಇದೊಂದು ಸ್ಕ್ಯಾನಿಂಗ್ ಆ್ಯಪ್ ಮುಖಾಂತರ ಬಳಸುವ ತಂತ್ರಜ್ಞಾನವಾಗಿರುತ್ತದೆ. ಕಂಪ್ಯೂಟರ್ ಮುಖಾಂತರ ಜೋಡಿಸಲ್ಪಟ್ಟ ಸ್ಕ್ಯಾನಿಂಗ್ ಸಾಧನವನ್ನು ಬಾಯಿಯ ಒಳಗೆ ಮತ್ತು ಹಲ್ಲು ವಸಡುಗಳ ಸುತ್ತ ಹಿಡಿದು ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ದಾಖಲಿಸಲಾಗುತ್ತಿದೆ. ಇದೊಂದು ಮೂರು ಆಯಾಮಗಳಲ್ಲಿ ದಾಖಲೀಕರಿಸುವ ವಿಧಾನವಾಗಿರುವ ಕಾರಣದಿಂದ ಅತ್ಯಂತ ನಿಖರ ಮತ್ತು ಪರಿಪೂರ್ಣ ದಾಖಲೆ ನಮಗೆ ದೊರಕುತ್ತದೆ. ಸ್ಕ್ಯಾನಿಂಗ್ ಸಾಧನವನ್ನು ಹಲ್ಲಿನ ಸುತ್ತ ಚಲಿಸಿದಾಗ ಹಲ್ಲಿನ ಮತ್ತು ವಸಡಿನ ಸೂಕ್ಷ್ಮವಾದ ಜಾಗಗಳನ್ನು ಮತ್ತು ಮೇಲ್ಮೈಯನ್ನು ನಿಖರವಾಗಿ ದಾಖಲಿಸಿ ಕಂಪ್ಯೂಟರ್ ಪರದೆ ಮೇಲೆ ಮೂಡಿಸುತ್ತದೆ. ಈ ರೀತಿ ಕಂಪ್ಯೂಟರ್ ಪರೆದೆಯು ಆ್ಯಪ್ ಮುಖಾಂತರ ಪಡೆದ ಮಾಹಿತಿಯನ್ನು ತಕ್ಷಣವೇ ಲ್ಯಾಬ್ ಗಳಿಗೆ ಮಿಂಚಂಚೆ ಮುಖಾಂತರ ಅಥವಾ ವಾಟ್ಸ್‍ಪ್ ಮುಖಾಂತರ ಕಳುಹಿಸಬಹುದಾಗಿದೆ. ಕೇವಲ 5 ರಿಂದ 10 ನಿಮಿಷಗಳಲ್ಲಿ ಈ ರೋಗಿಯ ರೋಗದ ಪೂರ್ಣ ಚಿತ್ರಣ ಪಡೆಯಲು ಸಾಧ್ಯವಿದೆ. ಅದೇ ರೀತಿ ಹುಳುಕಾದ ಹಲ್ಲಿನ ಭಾಗಗಳ ಚಿತ್ರಣವನ್ನು ದೊಡ್ಡ ಕಂಪ್ಯೂಟರ್ ಪರದೆ ಮುಖಾಂತರ ಹಲ್ಲಿನ ಭಾಗಗಳ ಚಿತ್ರಣವನ್ನು ದೊಡ್ಡ ಕಂಪ್ಯೂಟರ್ ಪರದೆ ಮುಖಾಂತರ ರೋಗಿಗಳಿಗೆ ತೋರಿಸಿ ತಿಳಿಸಿ ಹೇಳಲು ಸಾಧ್ಯವಾಗುತ್ತದೆ. ಇದಲ್ಲದೆ, ನಾಲಗೆ ತಳಭಾಗದಲ್ಲಿ ,ವಸಡುಗಳಲ್ಲಿ ಉಂಟಾಗಿರುವ ಗಾಯಗಳನ್ನು ಅಥವಾ ಗಡ್ಡೆಗಳನ್ನು ಕೂಡಾ ದೊಡ್ಡದಾಗಿ ಮೂರು ಆಯಾಮಗಳಲ್ಲಿ ಕಂಪ್ಯೂಟರ್ ಪರದೆಯಲ್ಲಿ ಚಿತ್ರಿಸಬಹುದಾಗಿದೆ. ಹೀಗೆ ರೋಗ ಪತ್ತೆ ಹಚ್ಚಲು, ದಂತಕ್ಷಯವನ್ನು ಗುರುತಿಸಲು ಮತ್ತು ಹಲ್ಲಿನ ಅಚ್ಚು ತೆಗೆಯಲು ಡೆಂಟಲ್ ಸ್ಕ್ಯಾನಿಂಗ್ ಬಹಳ ಉಪಯುಕ್ತ ಎಂದು ಸಾಬೀತಾಗಿದೆ. ಈ ಹಿಂದೆ ಹಲ್ಲಿಗೆ ಕ್ರೌನ್ ತಯಾರಿಸುವಾಗ ಹಲ್ಲಿಗೆ ನಿಗದಿತವಾದ ರೂಪ ಮತ್ತು ರಚನೆ ನೀಡಿದ ಬಳಿಕ ಆಲ್ಜಿನೇಟ್ ಎಂಬ ಅಚ್ಚು ತೆಗೆಯುವ ವಸ್ತುವನ್ನು ಅಥವಾ ಹೈಡ್ರೋಕೊಲಾಯ್ಡು ಎಂಬ ವಸ್ತು ಬಳಸಿ ಅಚ್ಚು ತೆಗೆಯಲಾಗುತ್ತಿತ್ತು. ಹೀಗೆ ತೆಗೆದ ಅಚ್ಚನ್ನು ಡೆಂಟಲ್ ಸ್ಟೋನ್ ಬಳಸಿ ಹಲ್ಲಿನ ಯಥಾನಕಲು ಮಾಡಿ ನಂತರ ಕ್ರೌನ್ ಮಾಡಲು ಬಳಸಲಾಗುತ್ತದೆ. ಈ ರೀತಿ ಮಾಡಲು ಬಹಳ ಸಮಯ ಮತ್ತು ಶ್ರಮ ಬೇಕಾಗುತ್ತದೆ. ಈಗ ಸ್ಕ್ಯಾನಿಂಗ್ ಉಪಕರಣ ಬಂದ ಬಳಿಕ ಊರಿನಿಂದ ಊರಿಗೆ ಅಥವಾ ಇನ್ನಾವುದೋ ದೇಶದ ಲ್ಯಾಬ್‍ಗೆ ಕ್ಷಣಾರ್ಧದಲ್ಲಿ ಮುಟ್ಟಿಸಲು,ಮಿಂಚಂಚೆ ಮುಖಾಂತರ ಕಳುಹಿಸಲು ಸಾಧ್ಯವಾಗಿದೆ. ಅದೇ ರೀತಿ ಸೂಕ್ಷ್ಮಾತಿಸೂಕ್ಷ್ಮ ದಾಖಲೆಗಳನ್ನು ದಾಖಲಿಸಿ ಅತೀ ನಿಖರವಾದ ಮತ್ತು ಉನ್ನತ ಗುಣಮಟ್ಟದ ದಂತ ಕ್ರೌನ್‍ಗಳನನು ತಯಾರಿಸಲು ಸಾಧ್ಯವಾಗಿದೆ.

ಲಾಭಗಳು ಏನು?

1) ಅತ್ಯಂತ ನಿಖರವಾಗಿ ಹಲ್ಲಿನ ಅಳತೆ ಅಥವಾ ಅಚ್ಚು ತೆಗೆಯಲು ಸಾಧ್ಯವಾಗಿದೆ.
2) ಉನ್ನತ ಗುಣಮಟ್ಟದ ಪರಿಪೂರ್ಣ ಹಾಗೂ ಬಿಗಿ ಹಿಡಿತ ಇರುವ ಕ್ರೌನ್‍ಗಳನ್ನು ತಯಾರಿಸಲು ಸಾಧ್ಯವಾಗಿದೆ.
3) ಸಮಯದ ಉಳಿತಾಯ ಮಾಡಲು ಸಾಧ್ಯವಿದೆ. ಭೌತಿಕವಾಗಿ ಹಲ್ಲಿನ ಅಚ್ಚನ್ನು ತೆಗೆದುಕೊಂಡು ಲ್ಯಾಬ್‍ಗೆ ಹೋಗುವ ಅಗತ್ಯವಿಲ್ಲ. ನೇರವಾಗಿ ಮಿಂಚಂಚೆ ಮುಖಾಂತರ ಮೂರು ಆಯಾಮದ ಹಲ್ಲಿನ ಚಿತ್ರಣವನ್ನು ನೇರವಾಗಿ ಲ್ಯಾಬ್‍ಗೆ ಕ್ಷಣಾರ್ಧದಲ್ಲಿ ಕಳುಹಿಸಲು ಸಾಧ್ಯವಿದೆ.

4) ರೋಗಿಗಳಿಗೆ ಅವರ ಹಲ್ಲಿನ ಚಿತ್ರಣವನ್ನು ಪೂರ್ತಿಯಾಗಿ ತೋರಿಸಲು ಸಾಧ್ಯವಾಗಿದೆ. ಆ ಮೂಲಕ ರೋಗಿಗಳ ಬಗ್ಗೆ ತಿಳಿ ಹೇಳಲು ಮತ್ತು ಜಾಗೃತಿ ಮೂಡಿಸಲು ಸಾದ್ಯವಾಗಿದೆ.

5) ರೋಗಿಗಳ ಬಾಯಿಯಲ್ಲಿ ಯಾವುದೇ ರೀತಿಯ ಮಿಶ್ರಣ ಮಾಡಿದ ವಸ್ತುವನ್ನು ಹಲ್ಲಿನ ಮೇಲೆ ಹಾಕಿ ಅಚ್ಚು ತೆಗೆಯುವ ಪ್ರಮೇಯ ಬರುವುದೂ ಇಲ್ಲ. ಹೆಚ್ಚಿನ ರೋಗಿಗಳಿಗೆ ಈ ರೀತಿ ಮಾಡಿದಾಗ ವಾಂತಿ ವಾಕರಿಕೆ ಬರುವ ಸಾಧ್ಯತೆ ಇರುತ್ತದೆ
.
ನಷ್ಟಗಳು:

1) ಸ್ಕ್ಯಾನಿಂಗ್ ಉಪಕರಣ ಈಗ ಬಹಳ ದುಬಾರಿಯಾಗಿದೆ. ಉನ್ನತ ಗುಣಮಟ್ಟದ ಸ್ಕ್ಯಾನಿಂಗ್ ಉಪಕರಣಕ್ಕೆ ಕನಿಷ್ಟ 15 ಲಕ್ಷ ರೂಪಾಯಿ ಇದೆ. ಕಳಪೆ ಗುಣಮಟ್ಟದ ಸ್ಕ್ಯಾನಿಂಗ್ ಉಪಕರಣಕ್ಕೆ 3 ರಿಂದ 4 ಲಕ್ಷ ರೂಪಾಯಿ ಇರುತ್ತದೆ.

2) ಸ್ಕ್ಯಾನಿಂಗ್ ಮಾಡುವ ಸಾಧನ ಬಳಸಲು ಕನಿಷ್ಟ ತರಬೇತಿ ಅಗತ್ಯ.
3) ದುಬಾರಿ ಸ್ಕ್ಯಾನಿಂಗ್ ಮಾಡಿದಾಗ ದಂತ ಚಿಕಿತ್ಸೆ ಯು ದುಬಾರಿಯಾಗುವ ಸಾಧ್ಯತೆ ಇರುತ್ತದೆ.
4) ಸ್ಕ್ಯಾನಿಂಗ್ ಮಾಡಲು ಪೂರಕವಾಗಿ ಕಂಪ್ಯೂಟರ್ ಮತ್ತು ಅಂತರ್ಜಾಲದ ಅವಶ್ಯಕತೆ ಇರಬೇಕಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸೌಲಭ್ಯ ಇರದೇ ಇರಲೂ ಬಹುದು.

ಕೊನೆಮಾತು:

ದಂತ ಚಿಕಿತ್ಸೆ ಎನ್ನುವುದು ಈ ಹಿಂದೆ ಬರೀ ನೋವು ನಿವಾರಕ ಹಾಗೂ ದಂತ ನೋವು ಶಮನಕ್ಕೆ ಮಾತ್ರ ಸೀಮಿತವಾಗಿದ್ದು, ಈಗ ಒಂದು ಹೆಜ್ಜೆ ಮುಂದೆ ಹೋಗಿ ಸೌಂದರ್ಯವರ್ಧಕ ಚಿಕಿತ್ಸೆ ಆಗಿ ಬಹುತೇಕ ಪರಿವರ್ತನೆ ಆಗಿದೆ. ಈ ಹಿನ್ನೆಲೆಯಲ್ಲಿ ರೋಗಿಗಳಿಗೆ ಉನ್ನತ ಗುಣಮಟ್ಟದ ಚಿಕಿತ್ಸೆ ನೀಡಲು ತಂತ್ರಜ್ಞಾನವನ್ನು ಬಳಸುವುದು ಅನಿವಾರ್ಯ. ಹೊಸತನಕ್ಕೆ ತೆರೆದುಕೊಂಡು ಸಾಂಪ್ರದಾಯಿಕ ದಂತ ಚಿಕಿತ್ಸೆಗೆ ನೂತನ ಸ್ಪರ್ಶ ನೀಡಿ ನಿಖರ ಮತ್ತು ಪರಿಪೂರ್ಣ ದಂತ ಚಿಕಿತ್ಸೆ ನೀಡುವಲ್ಲಿ ಡೆಂಟಲ್ ಸ್ಕ್ಯಾನಿಂಗ್ ಉಪಕರಣ ಬಹಳ ಅವಶ್ಯಕ ಮತ್ತು ಅನಿವಾರ್ಯ ಎಂದು ಈಗಾಗಲೇ ಸಾಬೀತಾಗಿದೆ. ಒಟ್ಟಿನಲ್ಲಿ ನುರಿತ ದಂತ ವೈದ್ಯರ ಅನುಭವ ಮತ್ತು ದಂತ ಕೌಶಲ್ಯದ ಜೊತೆಗೆ ನೂತನ ಆವಿಷ್ಕಾರದ ಮತ್ತು ಉನ್ನತ ತಂತ್ರಜ್ಞಾನ ಬಳಸಿದ ಉಪಕರಣಗಳನ್ನು ಬಳಸಿದಲ್ಲಿ ರೋಗಿಗಳಿಗೆ ವಿಶ್ವದರ್ಜೆಯ ದಂತ ಚಿಕಿತ್ಸೆ ದೊರೆತು ,ರೋಗಿಗಳ ಮುಖದಲ್ಲಿ ಮಂದಹಾಸ ಮೂಡುವುದರಲ್ಲಿ ಸಂದೇಹವೇ ಇಲ್ಲ.

ಡಾ|| ಮುರಲೀಮೋಹನ್ ಚೂಂತಾರು
BDS,MDS,DNB,MBA,MOSRCSEd
ಬಾಯಿ ಮುಖ ಮತ್ತುದವಡೆ ಶತ್ರಚಿಕಿತ್ಸಕರು
Mob:9845135787
drmuraleechoontharu@gmail.com
drmuraleemohan@gmail.com
www.surakshadental.com

LEAVE A REPLY

Please enter your comment!
Please enter your name here