‘ಗುಮಟ್ ಗಿನ್ಯಾನ್’ ಒಂದು ದಿನದ ಗುಮ್ಟಾ ತರಬೇತಿ ಕಾರ್ಯಗಾರ

0
61

ಮಂಗಳೂರು: ಮಿಲಾಗ್ರಿಸ್ ಕಾಲೇಜು ಮಂಗಳೂರು ಇದರ ಕೊಂಕಣಿ ಸಂಘದ ವತಿಯಿಂದ ಮಾಂಡ್ ಸೋಭಾಣ್ ಸಹಯೋಗದೊಂದಿಗೆ ‘ಗುಮಟ್ ಗಿನ್ಯಾನ್’ ಒಂದು ದಿನದ ಗುಮ್ಟಾ ತರಬೇತಿ ಕಾರ್ಯಗಾರವು ಗುರುವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಂಡ್ ಸೋಭಾಣ್ ಅಧ್ಯಕ್ಷರಾದ ಲುವಿ ಪಿಂಟೊ ಮಾತನಾಡಿ, ‘ಗುಮ್ಟಾ ನಮ್ಮ ಸಂಸ್ಕೃತಿಯ ಪ್ರತೀಕ.  ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಇಂದಿನ ಯುವ ಪೀಳಿಗೆಯ ಕೈಯಲ್ಲಿದೆ. ವಿದ್ಯಾರ್ಥಿಗಳ ಮೂಲಕ ಇಂತಹ ಒಂದು ಕಲೆಯನ್ನು ನಮ್ಮ ಮುಂದಿನ ಜನಾಂಗಕ್ಕೆ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಲ್ವಿನ್ ಸೇರಾವೊ ಅತಿಥಿಗಳನ್ನು ಸ್ವಾಗತಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

 ಕಾರ್ಯಗಾರದಲ್ಲಿ ಗುಮಟವಾದನದ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಗುಮ್ಟಾವಾದಕರಾದ ಜಾಯೆಲ್ ಪಿರೇರಾ, ಕುಮಾರಿ ಜಾಸ್ಮಿನ್ ಲೋಬೊ, ನಿಕೋಲ್ ಮೋರಸ್, ಡೆಲ್ಟಾನ್ ಲೋಬೊ ಅವರು ಕಾರ್ಯಗಾರದಲ್ಲಿ ತರಬೇತಿ ನೀಡಿದರು. 40 ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಂಡ್ ಸೋಭಾಣ್ ನ ಸದಸ್ಯರಾದ ಕಿಶೋರ್ ಫೆರ್ನಾಂಡಿಸ್, ಕಾಲೇಜಿನ ಕೊಂಕಣಿ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಆಸ್ಟಿನ್ ಡಿಸೋಜಾ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಂದ ಗುಮ್ಟಾವಾದನ ನಡೆಯಿತು.

ವಿದ್ಯಾರ್ಥಿ ಜಾಸ್ಲಿನ್ ವಾಲ್ಡರ್ ಕಾರ್ಯಕ್ರಮ ನಿರೂಪಿಸಿದರು ಕಾಲೇಜಿನ ಕೊಂಕಣಿ ಸಂಘದ ಸಂಚಾಲಕಿ ಟ್ರೆಸ್ಸಿ ಪಿಂಟೋ ವಂದಿಸಿದರು.

LEAVE A REPLY

Please enter your comment!
Please enter your name here