ಉಡುಪಿ : ಶೋಷಿತವರ್ಗ ಮುಖ್ಯವಾಹಿನಿ ಸೇರಲು ಅಂಬೇಡ್ಕರ್​ ಕಾರಣ

0
50

ದೇಶದಲ್ಲಿ ಪ್ರತಿ ಪ್ರಜೆಗಳಿಗೆ ಸಮಾನ ಅವಕಾಶ ಮತ್ತು ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಸೇರಲು ಸಾಧ್ಯವಾಗಿರುವುದಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ಕಾರಣ ಎಂದು ರಾಜ್ಯ ಬಿಜೆಪಿ ಚುನಾವಣಾಧಿಕಾರಿ ಕ್ಯಾಪ್ಟನ್​ ಗಣೇಶ್​ ಕಾರ್ಣಿಕ್​ ಹೇಳಿದರು.

ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಜಿಲ್ಲಾ ಎಸ್​.ಸಿ. ಮೋರ್ಚಾ, ಜಿಲ್ಲಾ ಎಸ್​.ಟಿ. ಮೋರ್ಚಾ ಮತ್ತು ಜಿಲ್ಲಾ ಒಬಿಸಿ ಮೋರ್ಚಾ ನೇತೃತ್ವದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
ದೇಶದಲ್ಲಿ 356ನೇ ವಿಧಿ ದುರುಪಯೋಗಪಡಿಸಿಕೊಂಡು ಚುನಾಯಿತ ಸರ್ಕಾರಗಳನ್ನು 90 ಬಾರಿ ಅಮಾನತುಗೊಳಿಸಿದ ಕಾಂಗ್ರೆಸ್​ ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಸಂಗತಿ. ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಂಬೇಡ್ಕರ್​ ಅವರಿಗೆ ಸಂಬಂಧಿಸಿದ 5 ಸ್ಥಳಗಳನ್ನು ಪಂಚತೀರ್ಥ ಹೆಸರಿನಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಅವರಿಗೆ ಭಾರತರತ್ನ ಗೌರವವನ್ನು ಕೊಡಬೇಕಾದರೆ ಕಾಂಗ್ರೆಸ್​ ಸರ್ಕಾರ ತೊಲಗಬೇಕಾಯಿತು. 2047ಕ್ಕೆ ವಿಕಸಿತ ಭಾರತ ನಿರ್ಮಾಣ ಮಾಡುವ ಮೂಲಕ ಅಂಬೇಡ್ಕರ್​ ಅವರಿಗೆ ನೈಜ ಗೌರವ ಸಲ್ಲಿಸುವ ಅಗತ್ಯವಿದೆ ಎಂದು ಹೇಳಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯ ಕಾಂಗ್ರೆಸ್​ ಸರ್ಕಾರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ 42 ಸಾವಿರ ಕೋಟಿ ರೂ. ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಆದರೂ ದಲಿತ ಮುಖಂಡರೆನಿಸಿಕೊಂಡವರು ಚುನಾವಣೆ ಸಂದರ್ಭದಲ್ಲಿ ದಲಿತರ ಕಾಲೋನಿಗಳಿಗೆ ತೆರಳಿ ಬಿಜೆಪಿ ಓಟ್​ ಹಾಕಬೇಡಿ ಎನ್ನುತ್ತಿದ್ದಾರೆ. ಈ ಬಗ್ಗೆ ಮೋರ್ಚಾಗಳು ಗಟ್ಟಿಧ್ವನಿಯಲ್ಲಿ ಮಾತನಾಡಬೇಕು. ಜನರಿಗೆ ನೈಜ ವಿಚಾರಗಳನ್ನು ತಿಳಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್​ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಜಿಲ್ಲಾಧ್ಯಕ್ಷ ಕುಮಾರ್​ದಾಸ್​, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್​ ನಾಯಕ್​, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕೊಡವೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here