ಸಾಂಪ್ರದಾಯಿಕ ಕಲ್ಲುಗಣಿಗಾರಿಕೆ ಜಾಗ ಕಬಳಿಕೆಗೆ ಕೊರಗರ ವಿರೋಧ

0
53

ಉಡುಪಿ: ಕೊರಗ ಕುಟುಂಬಗಳು ಹಲವು ದಶಕದಿಂದ ನಡೆಸಿಕೊಂಡು ಬಂದ ಸಾಂಪ್ರದಾಯಿಕ ಕಲ್ಲುಗಣಿಗಾರಿಕೆ ಜಾಗವನ್ನು ಅನ್ಯರು‌ ಕಬಳಿಸಲು ಪ್ರಯತ್ನಿಸುತ್ತಿದ್ದು, ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗರಿಕೆಮಠ, ಅಚ್ಲಾಡಿಯ ಕೊರಗ ಕುಟುಂಬಗಳು ಬ್ರಹ್ಮಾವರ ತಹಶಿಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಸುಜಾತ ಮಾತನಾಡಿ, ಉಡುಪಿ ಜಿಲ್ಲೆಯ ಯಡ್ತಾಡಿ ಗ್ರಾಮದ ಸರ್ವೆ ನಂಬರ್ 145 ರಲ್ಲಿ 1.84 ಎಕ್ರೆ ಜಾಗದಲ್ಲಿ ಪರಿಶಿಷ್ಠ ಪಂಗಡದ ರಮಣಿ, ನರ್ಸಿ, ಐತ, ಚಂದ್ರ,ಭಾಸ್ಕ ಅವರು ಪಾರಂಪರಿಕವಾಗಿ ಕಟ್ಟಡ ಕಲ್ಲು ಗಣಿಗಾರಿಕೆ ಮಾಡಿಕೊಂಡು ಬಂದಿದ್ದಾರೆ. ಅಲ್ಲದೆ ಸದ್ರಿ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಆದರೆ ಇದೀಗ ಈ ಜಾಗದಲ್ಲಿ ಕಟ್ಟಡ ಕಲ್ಲು ಎತ್ತೆಚ್ಚವಾಗಿ ಸಿಗುವುದರಿಂದ ಸ್ಥಳೀಯ ಒಂದಷ್ಟು ಮಂದಿ ರಾಜಕೀಯ ಪ್ರಭಾವ ಬಳಸಿ ಆ ಜಾಗವನ್ನು ತಮ್ಮದಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಸರಕಾರಕ್ಕೆ ಕಲ್ಲು ಕೋರೆಯ ಪರವಾನಿಗೆ ಅರ್ಜಿಯನ್ನು ಸಲ್ಲಿಸುತ್ತಾರೆ. ಹೀಗಾಗಿ ಇವರಿಗೆ ಈ ಜಾಗದಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಟ್ಟರೆ ಮೂಲ ನಿವಾಸಿಗಳಾದ ನಮಗೆ ಅನ್ಯಾಯವಾಗುತ್ತದೆ. ಜಿಲ್ಲಾಧಿಕಾರಿ ಯಾವುದೇ ಕಾರಣಕ್ಕೂ ಅವರಿಗೆ ಕಲ್ಲು ಗಣಿಗಾರಿಕೆ ಮಾಡಲು ಅವಕಾಶ ನೀಡಬಾರದು ಎಂದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಮಾತನಾಡಿ, ಕೊರಗ ಸಮಾಜದ ಮೇಲೆ ಬಲಾಢ್ಯರು, ರಾಜಕೀಯ ಪ್ರಾಬಲ್ಯರಿಂದ‌ ನಿರಂತರ ದಾಳಿ, ದೌರ್ಜನ್ಯ ನಡೆಯುತ್ತಿದೆ. ಅದರ ಮುಂದುವರಿದ ಭಾಗ ಎನ್ನುವಂತೆ ಇದೀಗ ಸಾಂಪ್ರದಾಯಿಕ ಕಲ್ಲುಗಣಿಗಾರಿಕೆ ಕಾರ್ಮಿಕರನ್ನ ಒಕ್ಕಲೆಬ್ಬಿಸುವ ಹುನ್ನಾರ ಗರಿಕೆಮಠದಲ್ಲಿ ನಡೆಯುತ್ತಿದೆ. ಪ್ರಭಾವಗಳಿಗೆ ಮಣಿದು ಕೊರಗ ಕುಟುಂಬ ಹೊರತುಪಡಿಸಿ ಇತರರಿಗೆ ಪರವಾನಿಗೆ ನೀಡಿದಲ್ಲಿ ಅಮರಣಾಂತ ಉಪವಾಸ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಸುದರ್ಶನ್ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ಸಂದರ್ಭ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕಾರ್ಯದರ್ಶಿ ಸುಜಾತ ಹಾಗೂ ಕೊರಗ ಸಮಾಜದ ಪ್ರಮುಖರಾದ ಬೋಗ್ರ ಕೊಕ್ಕರ್ಣೆ, ಶೀನ ಕೊರಗ ಇನ್ನಾ, ದಿವಾಕರ ಕಳ್ತೂರು, ವೆಂಕಟೇಶ ಮಧುವನ, ಸಂತ್ರಸ್ತರಾದ ರಮಣಿ, ಚಂದ್ರ, ನರ್ಸಿ, ಮಂಜುಳ ಮತ್ತಿತ್ತರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here