ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಇಳಿಜಾರು ತಿರುವಿನಲ್ಲಿ ಗೂಗಲ್ ಮ್ಯಾಪ್ ನಂಬಿ ಬಂದ ಸರಕು ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆ ವಿವರ:
ಬುಧವಾರ ತಡರಾತ್ರಿ ಸುಮಾರು ಎರಡು ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಲಾರಿ ಚಾಲಕನು ಹೊಸ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರಣ, ಕಡಂದಲೆಯ ಕಡಿದಾದ ಇಳಿಜಾರು ಮತ್ತು ಅಪಾಯಕಾರಿ ತಿರುವಿನಲ್ಲಿ ಗೊಂದಲಕ್ಕೆ ಸಿಲುಕಿ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾರೆ.
ನಿಯಂತ್ರಣ ತಪ್ಪಿದ ಲಾರಿಯು ರಸ್ತೆಯ ತಪ್ಪುರಾಂಗ್ ಸೈಡಿಗೆ ಬಂದು, ‘ಅಲ್ಲಿನ ಗುಡ್ಡದ ಬುಡಕ್ಕೆ ನಿರ್ಮಿಸಲಾಗಿದ್ದ ಗೋಡೆಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಗೋಡೆಗೆ ಡಿಕ್ಕಿ ಹೊಡೆದ ಕಾರಣ ಲಾರಿ ಅಲ್ಲಿಯೇ ನಿಂತಿದ್ದು ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಗೂಗಲ್ ಮ್ಯಾಪ್‌ನಿಂದಾದ ಎಡವಟ್ಟು:
ಚಾಲಕನು ಘಟನೆಯ ಬಗ್ಗೆ ಮಾಹಿತಿ ನೀಡಿ, ತಾನು ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿರುವ ಪೇಪರ್ ಮಿಲ್ ಕಡೆಗೆ ಹೋಗಬೇಕಿತ್ತು. ಆದರೆ, ಗೂಗಲ್ ಮ್ಯಾಪ್ ಮಾರ್ಗದರ್ಶನವನ್ನು ಅನುಸರಿಸಿ ಈ ಹಾದಿಗೆ ಬಂದಿದ್ದೇನೆ ಮತ್ತು ಇಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಹೊಸ ಚಾಲಕರು ಅಥವಾ ಹೊರಗಿನವರು ಗೂಗಲ್ ಮ್ಯಾಪ್ ನಂಬಿ ಇಂತಹ ಕಿರಿದಾದ ಮತ್ತು ಅಪರಿಚಿತ ಗ್ರಾಮೀಣ ರಸ್ತೆಗಳಲ್ಲಿ ಬರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.
ವರದಿ :ಜಗದೀಶ್ ಪೂಜಾರಿ ಕಡಂದಲೆ

