ಮೂಡುಬಿದಿರೆ ಸಮೀಪದ ಮಾಂಟ್ರಾಡಿ ಎಂಬಲ್ಲಿ ಗುರುವಾರ ಕಾರಿನಲ್ಲಿ ಬಂದ ಅಪರಿಚಿತರ ತಂಡವೊಂದು ರಿಕ್ಷಾವನ್ನು ಅಡ್ಡಗಟ್ಟಿ ಹಣ್ಣಿನ ವ್ಯಾಪಾರಿಯೊಬ್ಬರಿಂದ ₹19,000 ನಗದು ದೋಚಿ ಪರಾರಿಯಾಗಿದ್ದಾರೆ.
ದರೋಡೆಗೊಳಗಾದವರು ಈದು ಗ್ರಾಮದ ಮಹ್ಮದ್ ಎಂದು ಗುರುತಿಸಲಾಗಿದೆ. ಮೂಡುಬಿದಿರೆ ಮಾರುಕಟ್ಟೆಯಲ್ಲಿ ಹಣ್ಣು ಹಂಪಲು ವ್ಯಾಪಾರಿಯಾಗಿರುವ ಇವರು, ಮಂಗಳೂರಿನಿಂದ ಹಣ್ಣುಗಳನ್ನು ಖರೀದಿಸಲು ಗುರುವಾರ ನಸುಕಿನ ಜಾವ ಸುಮಾರು 3 ಗಂಟೆಯ ಸುಮಾರಿಗೆ ಈದು ವಿನಿಂದ ಆಟೋ ರಿಕ್ಷಾದಲ್ಲಿ ಹೊರಟಿದ್ದರು. ಮಾಂಟ್ರಾಡಿ ತಲುಪುತ್ತಿದ್ದಂತೆಯೇ, ಕಾರಿನಲ್ಲಿ ಬಂದ ಅಪರಿಚಿತರ ಗುಂಪು ಅವರ ರಿಕ್ಷಾವನ್ನು ಏಕಾಏಕಿ ಅಡ್ಡಗಟ್ಟಿದೆ . ಅಪರಿಚಿತರು , ಮಹ್ಮದ್ ಅವರಿಗೆ ಬೆದರಿಕೆಯನ್ನು ಹಾಕಿ, ಅವರ ಬಳಿ ಇದ್ದ ₹19,000 ನಗದನ್ನು ಕಸಿದುಕೊಂಡು ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ . ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ಈ ದರೋಡೆಕೋರರ ತಂಡವನ್ನು ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ .

