ಜನವರಿ 2,3,4 ರಂದು ಕರಾಯ ಮರಿಪ್ಪಾದೆ ಗರಡಿ ಜಾತ್ರೆ

0
110

ವರದಿ: ಹರೀಶ್ ಮಂಜೊಟ್ಟಿ.

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಮರಿಪ್ಪಾದೆಯ ಪ್ರಾಚೀನ ಗರಡಿಯಲ್ಲಿ ಬೈದೆರ್ಲೆ ನೇಮವು ಇದೆ ಜನವರಿ 2,3,4 ರಂದು ನಡೆಯಲಿದೆ. ಮೊದಲ ದಿನ ನೇಮದ ನಿಯಮದಂತೆ ಮೂಲ ಮಯಿಷಂದಾಯನಿಗೆ ಮೊದಲ ನೇಮವಾದರೆ, ನಂತರ ರಾಜನ್ ದೈವ ಕೊಡಮಣಿತ್ತಾಯನ ನೇಮವಾಗುತ್ತದೆ. ಕಡೆಯ ಮೂರನೇ ದಿನ ಮತ್ತೇ ಕೊಡಮಣಿತ್ತಾಯನ ನೇಮವಾಗುವುದು ಇಲ್ಲಿನ ವಿಶೇಷತೆ. ಅಂದರೆ ಕೊಡಿ (ಗರುಡ ಧ್ವಜ) ಏರುವುದು ಕೊಡಮಣಿತ್ತಾಯ ನೇಮದೊಂದಿಗೆ ಮತ್ತು ಕೊಡಿ ಇಳಿಸುವುದು ಕೂಡಾ ಕೊಡಮಣಿತ್ತಾಯನ ನೇಮದೊಂದಿಗೆ ಆಗಿರುತ್ತದೆ.


ಇಲ್ಲಿ ಕೊಡಮಣಿತ್ತಾಯನಿಗೆ ರಾಜನ್ ದೈವದ ಪಟ್ಟ. ಮರಿಪ್ಪಾದೆ ಬೈದೆರ್ಲೆ ನೇಮವು ಬಾವಂತಬೆಟ್ಟು ಗುತ್ತು ಮನೆಯವರ ಮುತಾಲಿಕೆಯಲ್ಲಿ ನಡೆಯುತ್ತದೆ. ಇದು ಜೈನ ಗುತ್ತು ಮನೆಯಾಗಿದ್ದು, ಇಲ್ಲಿಂದಲೇ ಬೈದರ್ಕಲ ಗರಡಿಗೆ ಭಂಡಾರ ಬರುವುದಾಗಿದೆ. ಕೆಲವು ವರ್ಷಗಳ ಹಿಂದೆ ದಿವಂಗತರಾದ ನಿರಂಜನ್ ಕುಮಾರ್ ಇವರ ಮುತುವರ್ಜಿಯಿಂದ ಇಲ್ಲಿ ದೈವ ದೇವರುಗಳ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶವು ವಿಜೃಂಭಣೆಯಿಂದ ನಡೆದಿತ್ತು..( ಆಗ ಧರ್ಮ ಮರೆತು ಜನ ಕೈಜೋಡಿಸಿದ್ದನ್ನು ನೆನಪಿಸಬಹುದಾಗಿದೆ) ಈಗಿನ ಯಜಮಾನರಾಗಿ ರಾಜೇಶ್ ಕುಮಾರ್ ರವರು ಮುಂದುವರಿಸುತ್ತಿದ್ದಾರೆ. ಬೈದೆರ್ಲೆ ನೇಮವಾಗುವ 7 ರಿಂದ 12 ದಿನಗಳ ಮೊದಲು ಬಾವಂತಬೆಟ್ಟು ಮನೆಯಲ್ಲಿ “ಜಾಲ ನೇಮ” ಎಂದು ಗುತ್ತು ಮನೆಯ ಇನ್ನಿತರ ಎಲ್ಲಾ ಚಾವಡಿ ದೈವಗಳಿಗೆ ನೇಮವಾಗುವ ಕ್ರಮವೂ ಇದೆ.

ಇಲ್ಲಿನ ಪ್ರಧಾನ ದೈವವಾಗಿರುವ ಕೊಡಮಣಿತ್ತಾಯನು ಬೆಳ್ತಂಗಡಿ ಕೊಡಮಣಿ ಬರ್ಕೆಯಿಂದ ಪ್ರಸರಣವಾಗುವ ಸಮಯದಲ್ಲಿ ಉಬಾರ ಮಕಲಾಬ್ಬೆಯ ಭೇಟಿಗೆ ಬರುವಾಗ ಕರಾಯ ಮರಿಪ್ಪಾದೆಯನ್ನು ತನ್ನ ನೆಲೆಯನ್ನಾಗಿಸಿದ ಉಲ್ಲೇಖ ಪಾರ್ದನದಲ್ಲಿ ಬರುತ್ತದೆ. ಕಾಲ ನಂತರ ಕೋಟಿ ಚೆನ್ನಯರು ಕೂಡಾ ಭೇಟಿ ನೀಡಿದ ಐತಿಹ್ಯವಿದ್ದು, ನಂತರದಲ್ಲಿ ಇಲ್ಲಿ ಗರಡಿ ನಿರ್ಮಿಸಲಾಗುತ್ತದೆ. ಕೋಟಿ ಚೆನ್ನಯರು ಜನ್ಮವಾದ ಕಾಲದಲ್ಲಿ ಉಪ್ಪಿನಂಗಡಿಯನ್ನು ಪ್ರಮುಖ ನೆಲೆಯಾಗಿಸಿ (ಉಪ್ಪಿನಗಂಗಡಿಯಲ್ಲಿ ಸುಂಕ ಕೇಂದ್ರ, ದೊಡ್ಡ ಕೋಟೆಯೂ ಇತ್ತು) ಬಂಗರಸರ ಅಧೀನದಲ್ಲಿ ಬಲ್ಲಾಳರು ಆಳ್ವಿಕೆ ನಡೆಸುತ್ತಿದ್ದರು. ಉಪ್ಪಿನಂಗಡಿ ಬಲ್ಲಾಳರಿಗೆ ಒಟ್ಟು 22 ಬೀಡು ಬಲ್ಲಾಳರಿದ್ದರು. ಆಗ ಕರಾಯ ಗ್ರಾಮವು ಬಂಡಾಡಿ ಬಲ್ಲಾಳರ ಆಳ್ವಿಕೆಯಲ್ಲಿತ್ತು. ಬೀಡುಮನೆ ಬಂಡಾಡಿಯಲ್ಲಿತ್ತು.(ಮಾಹಿತಿ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ)

ಒಂದೊಮ್ಮೆ ಈ ಬೈದರ್ಕಳ ನೇಮಕ್ಕೆ ಶಿವರಾಮ ಕಾರಂತರು ಕೂಡಾ ಭೇಟಿ ನೀಡಿ 1934 ರಲ್ಲಿ ಬಾಸೆಲ್ ಮಿಷನ್ ಮೂಲಕ ಪ್ರಕಟಗೊಂಡ ತನ್ನ ಪ್ರಮುಖ ಕೃತಿ ಚಿತ್ರಮಯ ದಕ್ಷಿಣ ಕನ್ನಡ ದಲ್ಲಿ ಬೈದೆರುಗಳ ನೇಮದ ಭಾವಚಿತ್ರ ಹಾಕಿ ಈ ಬಗ್ಗೆ ವಿವರಿಸಿದ್ದಾರೆಂದರೆ ಇದು ಎಷ್ಟು ಪ್ರಸಿದ್ದವಾದ ಜಾತ್ರೆಯಾಗಿದ್ದಿರಬಹುದು ಎಂದು ಊಹಿಸಿ. ಇಲ್ಲಿ ಮೊದಲ ದಿನ ಮೈಸಂದಾಯ, ಕೊಡಮಣಿತ್ತಾಯ, ಇಷ್ಟ ದೇವತೆ ಮತ್ತು ಕಲ್ಕುಡನಿಗೆ ನೇಮ ನಡೆದು ಮರುದಿನ ಬೈದೆರ್ಲನೇಮ, ಮಾಣಿಬಾಲೆ ನೇಮವಾಗುತ್ತದೆ.ಇಲ್ಲಿ ಕೊಡಮಣಿತ್ತಾಯನಿಗೆ ಅರಸು ಮಾಡ, ಇಷ್ಟ ದೇವತೆಗೆ ಒರ್ಕ ಮಾಡ ಅಥವಾ ಒರ್ಕಲ್ಲ ಮಾಡದ ರಚನೆ ಇದೆ. ಒರ್ಕ ಮಾಡ ಅಂದರೆ ಒಂಟಿ ದೈವಗಳಿಗೆ ಉದ್ದವಾದ ಕಲ್ಲಿನಲ್ಲಿ ಗೋಪುರದಂತಹ ರಚನೆ ಮಾಡಿ ಅದರ ನಿರ್ದಿಷ್ಟ ಭಾಗದಲ್ಲಿ ದೀಪ ಇಡುವಷ್ಟೇ ಜಾಗವಿರುತ್ತದೆ. ಇದನ್ನು ಹೆಚ್ಚಾಗಿ ಒಂಟಿ ಕಲ್ಲಿನಲ್ಲಿ ಮಾಡುತ್ತಾರೆ. ಇಲ್ಲಿ ಆಧುನಿಕವಾಗಿ ನಿರ್ಮಿಸಲಾಗಿದೆ. ಕಲ್ಕುಡನಿಗೆ ಕಲ್ಲ ಮಾಡವಿದ್ದು, ಬೈದೆರುಗಳಿಗೆ ಸುಂದರವಾದ ಗರಡಿ ಇದೆ.

ದೈವ ನೆಲೆಗಳ ಪರಿಕಲ್ಪನೆಯಲ್ಲಿರುವ ಒರ್ಕಮಾಡ, ಕಲ್ಲಮಾಡ, ಅರಸುಮಾಡ, ಗರಡಿ, ಕಟ್ಟೆ ಹೀಗೆ ಎಲ್ಲಾ ವಿಧದ ನೆಲೆಗಳನ್ನು ಮರಿಪ್ಪಾದೆಯಲ್ಲಿ ನೋಡಬಹುದಾಗಿದೆ..ಹಿಂದೆ ಇಲ್ಲಿ ಜಾತ್ರೆಯ ಮೂರನೆ ದಿನ ಮಣ್ಣಿನ ಅಂಕಣ ಮಾಡಿ ಸಾಂಕೇತಿಕವಾಗಿ ಇಬ್ಬರು ದೊಣ್ಣೆ ಮತ್ತು ಚರ್ಮದಿಂದ ಮಾಡಿದ ಅಡ್ಡಣ ಹಿಡಿದು ಯುದ್ಧದ ಅಣಕವಾಡುವ ಕ್ರಮವಿತ್ತು. ಇದನ್ನು ಅಂಕೊ/ ಅಡ್ಡಣ ಪೆಟ್ಟು ಎನ್ನುತ್ತಿದ್ದರು. 2000 ಇಸವಿಯ ಜೀರ್ಣೋದ್ಧಾರದ ನಂತರ ಈ ಕ್ರಮಗಳನ್ನು ನಿಲ್ಲಿಸಲಾಗಿದೆ. ಅಂದರೆ ಇದು ಅರಸೊತ್ತಿಗೆಯ ಕಾಲದಲ್ಲಿ ಸೈನಿಕರನ್ನು ತಯಾರು ಮಾಡುತ್ತಿದ್ದ, ಗರಡಿ ಮನೆಯಿದ್ದ ಪ್ರದೇಶವೂ ಆಗಿದ್ದಿರಬಹುದು.

ಎಂದಿನಂತೆ ಈ ವರ್ಷವು ಊರವರು,ಗುತ್ತುಮನೆ, ಚಾಕರಿವರ್ಗ, ಕೋಟಿಚೆನ್ನಯ ಫ್ರೆಂಡ್ಸ್ ಇವರೆಲ್ಲರ ಸಹಕಾರದಲ್ಲಿ ವಿಜೃಂಭಣೆಯ ಮರಿಪ್ಪಾದೆ ಬೈದೆರ್ಲ ಜಾತ್ರೆ ನಡೆಯಲಿದೆ.

LEAVE A REPLY

Please enter your comment!
Please enter your name here