ಬೆಳ್ಳಾರೆ ಲ್ಯಾಬೋರೇಟರಿಯ ಸುರೇಶ- ಅನುಪಮಾ ದಂಪತಿಗಳ ಮಗಳು ವಿಭಾಶ್ರೀ ಎಂಸಿಎ ಪದವಿಯನ್ನು ಪಡೆದು ಬೆಂಗಳೂರಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ.ಆರನೇ ವಯಸ್ಸಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಕೆಯನ್ನು ವಿದುಷಿ ಸುಮತಿ ಎಂ ಭಟ್ ಇವರಲ್ಲಿ ಪ್ರಾರಂಭಿಸಿ, ಬಳಿಕ ವಿದುಷಿ ವಿದ್ಯಾ ರಮೇಶ್ ಬೈಂಕ್ರೋಡು ಅವರ ಶಿಷ್ಯೆಯಾಗಿ ಸೀನಿಯರ್ ಹಂತವನ್ನು ವಿಶಿಷ್ಟ ಶ್ರೇಣಿಯಲ್ಲಿ ಪೂರೈಸಿರುತ್ತಾರೆ. ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತ ತರಬೇತಿಯನ್ನು ಡಾ. ಕಿರಣ್ ಕುಮಾರ್ ಗಾನಸಿರಿ ಇವರ ಬಳಿ ಪ್ರಾರಂಭಿಸಿ ಕಳೆದ ನಾಲ್ಕು ವರ್ಷಗಳಿಂದ ಖ್ಯಾತ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಬೆಂಗಳೂರು ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ.
ಎಡನೀರು ಮಠ, ಬೇಕಲಂ ಗೋಶಾಲೆ, ಪೊಳಲಿ ದೇವಸ್ಥಾನ, ಪಾಣೆಮಂಗಳೂರು, ಕೋಟೆ ದೇವಸ್ಥಾನ ಮುಂತಾದ ಕಡೆ ಇತ್ತೀಚಿಗೆ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆ ಗಳಿಸಿದ ಇವರು ಬಾಲ್ಯದಿಂದಲೇ ಅನೇಕ ಪ್ರಶಸ್ತಿಗಳನ್ನು ಬಹುಮಾನಗಳನ್ನು ಪಡೆದಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್, ಸೀನಿಯರ್ ಹಂತಗಳಲ್ಲಿ ವಿಶಿಷ್ಟ ಶ್ರೇಣಿ ಯನ್ನು ಪಡೆದಿರುವ ಇವರು ಸುಳ್ಯ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾವ್ಯವಾಚನದಲ್ಲಿ ಪ್ರಥಮ, ಡಿವಿಜಿ ಬದುಕು ಬರಹ ಸುಳ್ಯ ತಾಲೂಕು ಮಟ್ಟದ ಗೀತ ಗಾಯನದಲ್ಲಿ ಪ್ರಥಮ, ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ “ಪ್ರತಿಭಾರತ್ನ”, ಜೆಸಿಐ ಬೆಳ್ಳಾರೆ ವತಿಯಿಂದ ಸನ್ಮಾನ, ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ, ಶಾಂತಿವನ ಟ್ರಸ್ಟ್ ಧರ್ಮಸ್ಥಳ ನಡೆಸಿದ ಶ್ಲೋಕ ಕಂಠ ಪಾಠ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ, ಜ್ಞಾನ ಮಂದಾರ ಅಕಾಡೆಮಿ ಬೆಂಗಳೂರು ಇವರಿಂದ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ zonal level ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ, ರಾಜ್ಯಮಟ್ಟದ ಕನ್ನಡ ಚಲನಚಿತ್ರ ಗೀತೆ ಗಾಯನ ಸ್ಪರ್ಧೆಯಲ್ಲಿ “ಪುನೀತ್ ಗಾನ ರತ್ನ”ಬಿರುದಿನೊಂದಿಗೆ ದ್ವಿತೀಯ, ವಿವೇಕಾನಂದ ಮಹಾವಿದ್ಯಾಲಯದಿಂದ “ಸಾಂಸ್ಕೃತಿಕ ರಾಯಭಾರಿ” ಪ್ರಶಸ್ತಿಯೊಂದಿಗೆ ಗೌರವ ಅಭಿನಂದನೆ, 2022,2023,2024 ಸತತ ಮೂರು ವರ್ಷಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಕೇಂದ್ರದ ವತಿಯಿಂದ ನಡೆಸಲ್ಪಟ್ಟ ಕನಕದಾಸ ಕೀರ್ತನೆಗಳ ಗಾಯನ ಸ್ಪರ್ಧೆಯಲ್ಲಿ “ಕನಕ ಪುರಸ್ಕಾರ”, 2025ರಲ್ಲಿ ಮಂಗಳೂರು ಆಕಾಶವಾಣಿಯ ಯುವ ವಾಣಿ ವಿಭಾಗದಲ್ಲಿ ಭಾವಗೀತೆ ಹಾಗೂ ಭಕ್ತಿ ಗೀತೆ ವಿಭಾಗಗಳಲ್ಲಿ ಕಾರ್ಯಕ್ರಮ ನೀಡಲು ಆಯ್ಕೆಯಾಗಿರುತ್ತಾರೆ.
ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026” ಇದೆ ಬರುವ ಜನವರಿ 18 ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ .

