ಸೂರಿಮಣ್ಣು : ಭಜನಾ ಮಂಗಲೋತ್ಸವಕ್ಕೆ ಸುವರ್ಣ ಸಂಭ್ರಮ : ಋಕ್‌ ಸಂಹಿತಾ ಮಹಾಯಾಗ – 7 ದಿನ ಭಜನೋತ್ಸವ

0
31

ಸುವರ್ಣ ಸಂಭ್ರಮದ ಭಜನೋತ್ಸವ ಯಶಸ್ವಿಗೆ ಸರ್ವರ ಸಹಕಾರ : ಸುರೇಶ ಶೆಟ್ಟಿ ಶಿವಪುರ.

ಸೂರಿಮಣ್ಣು : ಅಂದು ಅತ್ಯಂತ ಕುಗ್ರಾಮವಾಗಿದ್ದ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಬೆರಳೆಣಿಕೆಯ ಭಜಕರಿಂದ ಶುರುವಾಗಿದ್ದ ಭಜನೆಯು ಇದೀಗ ಸುವರ್ಣ ಸಂಭ್ರಮದಲ್ಲಿದೆ, ಇದೇ ಜನವರಿ 30 ರಿಂದ ಫೆಬ್ರವರಿ 9 ರತನಕ ಭಜನಾ ಮಂಗಲೋತ್ಸವದ ಸುವರ್ಣ ಸಂಭ್ರಮ, ಋಕ್‌ ಸಂಹಿತಾ ಮಹಾಯಾಗ ಹಾಗೂ 7 ದಿನಗಳ ಅಹೋರಾತ್ರಿ ಭಜನೋತ್ಸವ ಭಕ್ತಿ ವೈಭವದಿಂದ ನಡೆಯಲಿದೆ. ಭಜನಾ ಸಂಭ್ರಮವು ಐತಿಹಾಸಿಕ ಕಾರ್ಯಕ್ರಮವಾಗಲಿದ್ದು ಸರ್ವರೂ ಕೈಜೋಡಿಸಿ ಯಶಸ್ವಿಗೊಳಿಸುವಂತೆ ಸ್ಥಳೀಯ ಮುಖಂಡ ಶಿವಪುರ ಸುರೇಶ ಶೆಟ್ಟಿ ಹೇಳಿದರು.

ಅವರು ಭಾನುವಾರ ಶಿವಪುರ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಭಜನೆಯ ರೂವಾರಿ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಸದಾಶಿವ ಉಪಾಧ್ಯಾಯ ಮಾತನಾಡಿ ಅಂದು ಆರಂಭಗೊಂಡ ಭಜನೆಯು ಇಂದು ಸುವರ್ಣ ಸಂಭ್ರಮಕ್ಕೆ ಬಂದಿರುವುದು ನೋಡಿ ಮನಸ್ಸು ತುಂಬಿ ಬಂದಿದೆ, ಈ ತನಕ ನಮಗೆ ಸಹಕರಿಸಿದ ಭಜಕರಿಗೆ, ನೆರವಾದವರಿಗೆ ಗೌರವ ಸಮರ್ಪಣೆಯ ಜೊತೆಗೆ ವಿಶೇಷವಾಗಿ ಊರಿನ ಸರ್ವರ ಜತೆಗೂಡಿ ಸುವರ್ಣ ಸಂಭ್ರಮ ನಡೆಯಲಿದೆ ಎಂದರು.

ವೇದಮೂರ್ತಿ ಸೂರಿಮಣ್ಣು ರವಿರಾಜ್‌ ಉಪಾಧ್ಯಾಯ ಸುವರ್ಣ ಸಂಭ್ರಮದ ಸಮಗ್ರ ವಿವರ ನೀಡಿ ಕ್ಷೇತ್ರದಲ್ಲಿ ದೇವರ ಸಂಕಲ್ಪದಂತೆಯೇ ಎಲ್ಲವೂ ನಡೆದುಕೋಂಡು ಬರುತ್ತಿದೆ. ಭಜನೆಯು ದೇವರನ್ನು ಒಲಿಸುವ ಸುಲಭದ ಮಾರ್ಗ. ಅತಂಹ ಪುಣ್ಯದ ಕಾರ್ಯ ಕ್ಷೇತ್ರದಲ್ಲಿ ವಿಶೇಷವಾಗಿ ನಡೆಯಲಿದೆ. ವಿವಿಧ ಹಂತದಲ್ಲಿ ಸಮಾಲೋಚನೆ ನಡೆಸಿ ಸಿದ್ಧತೆ ನಡೆಸುತ್ತೇವೆ. ಯಶಸ್ವಿಗೊಳಿಸಲು ಕೈ ಬಲಗೊಳಿಸಿ ಎಂದರು. ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿಗೆ ದಾನಿ ಪ್ರಸನ್ನ ಶೆಟ್ಟಿ ಅವರು ನೀಡಿದ ಸೀರೆ ಸಮವಸ್ತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಸುವರ್ಣ ಸಂಭ್ರಮದ ಭಜನಾ ಮಂಗಲೋತ್ಸವದ ಯಶಸ್ವಿಗೆ ಸಮಿತಿಯನ್ನು ರಚಿಸಲಾಯಿತು.

ರಮೇಶ ಪೂಜಾರಿ ಶಿವಪುರ, ಮುನಿಯಾಲು ಸುಧಾಕರ ಶೆಟ್ಟಿ, ಶ್ರೀಧರ ಆಚಾರ್ಯ ಶಿವಪುರ, ಸುಧಾಕರ ಶೆಟ್ಟಿ, ಗಣಪತಿ ಮುದ್ರಾಡಿ, ಕಾಳು ಕುಲಾಲ್‌, ಶುಭಧರ ಶೆಟ್ಟಿ ಮುದ್ರಾಡಿ, ಜನ್ನಿ ಕುಟುಂಬಸ್ಥರು, ಸೂರಿಮಣ್ಣು ಸದಾಶಿವ ಉಪಾಧ್ಯಾಯ, ಪ್ರಸನ್ನ ಶೆಟ್ಟಿ ಪಡುಕುಡೂರು, ಪ್ರಸನ್ನ ಶೆಟ್ಟಿ ಒಂಬತೋಕ್ಲು, ಸುಭಾಶ್ಚಂದ್ರ ನಾಯ್ಕ್‌, ರಾಧಾಕೃಷ್ಣ ಪುತ್ತಿ, ಅಕ್ಷತಾ ಶೆಟ್ಟಿ, ಚೇತನ್‌ ಕುಲಾಲ್ ಸೇರಿದಂತೆ ಪ್ರಮುಖರು, ಸ್ಥಳೀಯ ಮುಖಂಡರು, ಸಂಘಸಂಸ್ಥೆಗಳು ಪ್ರಮುಖರು ಉಪಸ್ಥಿತರಿದ್ದರು. ‌
ರವಿರಾಜ್‌ ಉಪಾಧ್ಯಾಯ ಸ್ವಾಗತಿಸಿ ನಿರೂಪಿಸಿದರು. ಗಗನ್‌ ಶೆಟ್ಟಿ ಒಂಬತೋಕ್ಲು ವಂದಿಸಿದರು.

LEAVE A REPLY

Please enter your comment!
Please enter your name here