ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ ಉದ್ಘಾಟನೆ

0
14

ಉಡುಪಿ : ಮಕ್ಕಳಲ್ಲಿ ರಂಗ ಪ್ರಜ್ಞೆ ಬೆಳೆಸುವ ಮೂಲಕ ನೈತಿಕ ಮೌಲ್ಯಗಳ ತಳಹದಿಯಲ್ಲಿ ಉತ್ತಮ ಸಮಾಜ ನಿಮಾರ್ಣ ಸಾಧ್ಯ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಸೋಮವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ನಡೆದ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಂಗ ಶಿಕ್ಷಣದಿಂದ ಮಕ್ಕಳಲ್ಲಿ ಮನೋವಿಕಾಸವಾಗುತ್ತದೆ. ಸಭಾಕಂಪನ ಹೋಗುತ್ತದೆ. ಭಾಷಾ ಜ್ಞಾನ ಜೊತೆಗೆ ಬದುಕನ್ನು ಎದುರಿಸುವ ಜೀವನ ಮೌಲ್ಯಗಳ ಪಾಠ ದೊರೆಯುತ್ತದೆ. ಈ ನಿಟ್ಟಿನಲ್ಲಿ ರಂಗಭೂಮಿ ಉಡುಪಿ ಸಂಸ್ಥೆ ಶಾಲಾ ಕಾಲೇಜು ಮಕ್ಕಳಿಗೆ ರಂಗ ಶಿಕ್ಷಣ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಬಾರಿ 11 ಶಿಕ್ಷಣ ಸಂಸ್ಥೆಗಳು ರಂಗ ಶಿಕ್ಷಣ ಪಡೆಯಲು ಮುಂದಾಗಿವೆ. ಇದನ್ನು ಸುಮಾರು 25 ಶಾಲೆಗಳಿಗೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಉದ್ಯಮಿ ಹರಿಪ್ರಸಾದ್​ ರೈ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳ ಮನಸ್ಸು ಅತೀ ಸೂಕ್ಷ್ಮ ಹಾಗೂ ಚುರುಕಾಗಿದೆ. ಕೇವಲ ಅಂಕ ಗಳಿಸುವುದೇ ಮೂಲ ಉದ್ದೇಶ ಹೊಂದಿರುವ ಈಗಿನ ಶಿಕ್ಷಣ ವ್ಯವಸ್ಥೆ ಯಲ್ಲಿ ರಂಗಶಿಕ್ಷಣದಂತಹ ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂದು ತಿಳಿಸಿದರು.
ಎಂಜಿಎಂ ಕಾಲೇಜಿನ ಉಪ ಪ್ರಾಂಶುಪಾಲ ವಿಶ್ವನಾಥ್​ ಪೈ ಮಾತನಾಡಿದರು. ಕಾರ್ಯಕ್ರಮದಲ್ಲಿ ರಂಗಭೂಮಿ ಉಡುಪಿಯ ಉಪಾಧ್ಯಕ್ಷರುಗಳಾದ ರಾಜಗೋಪಾಲ್​ ಬಲ್ಲಾಳ್​ ಹಾಗೂ ಭಾಸ್ಕರ್​ ರಾವ್​ ಕಿದಿಯೂರು, ಖಜಾಂಚಿ ಭೋಜ, ಪ್ರಧಾನ ಕಾರ್ಯದರ್ಶಿ ಪ್ರದಿಪಚಂದ್ರ ಕುತ್ಪಾಡಿ ಉಪಸ್ತಿತರಿದ್ದರು.
ರವಿರಾಜ್​ ನಾಯಕ್​ ಕಾರ್ಯಕ್ರಮ ನಿರೂಪಿಸಿದರು. ರಂಗಶಿಕ್ಷಣ ಸಂಚಾಲಕ ವಿದ್ಯಾವಂತ ಆಚಾರ್ಯ ಸ್ವಾಗತಿಸಿದರು. ಅಮಿತಾಂಜಲಿ ಕಿರಣ್​ ವಂದಿಸಿದರು. ಈ ಸಂದರ್ಭದಲ್ಲಿ ರಂಗ ಶಿಕ್ಷಣ ಪಡೆದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಗೌರವಾರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here