ಕವಿ, ಸಾಹಿತಿ ಯೋಗೀಶ್ ಕಾಂಚನ್ ಬೈಕಂಪಾಡಿ ನಿಧನ

0
53

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಯಕ್ಷಗಾನ ಕಲಾವಿದ, ಕವಿ, ಲೇಖಕ, ನಾಟಕಕಾರ ಹಾಗೂ ಸಂಘಟಕ ಯೋಗೀಶ್ ಕಾಂಚನ್ ಬೈಕಂಪಾಡಿ ಅವರು (ಡಿಸೆಂಬರ್ 29, 2025) ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ತೀವ್ರ ಆಘಾತ ಉಂಟುಮಾಡಿದೆ.

ಡಾ. ಪಾಲ್ತಾಡಿ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಯೋಗೀಶ್ ಕಾಂಚನ್ ಅವರು ಮೂರು ವರ್ಷಗಳ ಕಾಲ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2023–24ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು 23-06-2024 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸ್ವೀಕರಿಸಿದ್ದರು.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ದಸರಾ ಕವಿಗೋಷ್ಠಿಯಲ್ಲಿ ತುಳು ಭಾಷೆಯನ್ನು ಪ್ರತಿನಿಧಿಸಿದ್ದ ಯೋಗೀಶ್ ಕಾಂಚನ್ ಅವರು, ಬಳಿಕ V4 ನ್ಯೂಸ್ ದೀಪಾವಳಿ ಕಾವ್ಯಾಂಜಲಿ ಕಾರ್ಯಕ್ರಮಕ್ಕೂ ಆಹ್ವಾನಿತರಾಗಿದ್ದರು. ಆದರೆ ಅವರ ಅಕಾಲಿಕ ನಿಧನ ಎಲ್ಲರನ್ನೂ ಆಘಾತಕ್ಕೆ ಒಳಪಡಿಸಿದೆ. ಸಜ್ಜನತೆ, ನಿಗರ್ವಿತನ ಮತ್ತು ಸ್ನೇಹಶೀಲ ಸ್ವಭಾವದಿಂದ ಪರಿಚಿತರಾಗಿದ್ದ ಕಾಂಚನ್ ನಿಜಾರ್ಥದಲ್ಲಿ ‘ಕಾಂಚನ’ವೇ ಆಗಿದ್ದರು ಎಂದು ಸಹೋದ್ಯೋಗಿಗಳು ಸ್ಮರಿಸುತ್ತಿದ್ದಾರೆ.

ಬೈಕಂಪಾಡಿಯ ಮೀನಕಳಿಯದ ನಿವಾಸಿಯಾಗಿದ್ದ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ತುಳುವಿನಲ್ಲಿ ‘ಮಣ್ಣ್ ದ ಮಗಳ್’, ‘ಸತ್ಯೋದ ಬಾಲೆಲ್’, ‘ಕೈಯಲ್ತ ಗುಳಿಗೆ’ ಹಾಗೂ ಕನ್ನಡದಲ್ಲಿ ‘ನಾಗ ಕನ್ನಿಕೆ’ ಎಂಬ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.
ತುಳು ಕವನ ಸಂಕಲನಗಳು ‘ಕಂಚಿಲ್’, ‘ತಂಞಣ ಬೊಲ್ಲಿ’, ಕನ್ನಡದಲ್ಲಿ ‘ವಾಸ್ತವತೆ’, ‘ನಗ್ನ ಸತ್ಯ’, ತುಳು ನಾಟಕ ‘ಚಿತ್ರಾಪುರೋತ ಸಿರಿದೇವಿ ಉಳ್ಳಾಲ್ದಿ’, ತುಳು ಕಥಾ ಸಂಕಲನ ‘ಪನ್ನಂಬರೋ’ ಸೇರಿದಂತೆ ಅನೇಕ ಕೃತಿಗಳು ಪ್ರಕಟವಾಗಿವೆ. ಇನ್ನೂ ಹಲವು ತುಳು–ಕನ್ನಡ ಕಾದಂಬರಿಗಳು ಹಾಗೂ ಯಕ್ಷಗಾನ ಪ್ರಸಂಗಗಳು ಅಪ್ರಕಟಿತವಾಗಿವೆ.

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರಿಗೆ ಸಂದಿವೆ. ಅನೇಕ ಕವಿಗೋಷ್ಠಿಗಳಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಆಕಾಶವಾಣಿಯಲ್ಲಿ ಅವರ ಬರಹಗಳು ಪ್ರಸಾರಗೊಂಡಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ತುಳು ಮತ್ತು ಕನ್ನಡ ಭಾಷೆಯ ಕಥೆ, ಕವನ, ಲೇಖನ ಹಾಗೂ ಅಂಕಣ ಬರಹಗಳು ಪ್ರಕಟವಾಗಿವೆ.

ಯೋಗೀಶ್ ಕಾಂಚನ್ ಬೈಕಂಪಾಡಿ ಅವರ ನಿಧನದಿಂದ ತುಳು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ ಸದಾ ಸ್ಮರಣೀಯವಾಗಿರಲಿದೆ.

– ಭಾಸ್ಕರ ರೈ ಕುಕ್ಕುವಳ್ಳಿ

LEAVE A REPLY

Please enter your comment!
Please enter your name here