ಬಂಟ್ವಾಳ : ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಬೋಳಂಗಡಿಯಲ್ಲಿ 2025-26ನೇ ಸಾಲಿನ ಬಂಟ್ವಾಳ ನಗರ ಕ್ಲಸ್ಟರ್ ಮಟ್ಟದ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನಕ್ಕೆ ಸಂಬಂಧಿಸಿದ ಕಲಿಕಾ ಹಬ್ಬ ಕಾರ್ಯಕ್ರಮ ಡಿಸೆಂಬರ್ 31 ಬುಧವಾರ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಂಟ್ವಾಳ ಪುರಸಭೆಯ ನಿಕಟಪೂರ್ವ ಅಧ್ಯಕ್ಷರಾದ ವಾಸು ಪೂಜಾರಿ ಮಾತನಾಡಿ ಸರಕಾರಿ ಶಾಲೆಗಳು ಉಳಿಯಬೇಕಾದರೆ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಸರಕಾರಿ ಶಾಲೆಗಳಲ್ಲಿ ಮಾಡಬೇಕು ಎಂಬ ಕಾನೂನು ತರುವ ಅಗತ್ಯತೆ ಇದೆ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸುವ ಅಗತ್ಯತೆ ಇದೆ, ಬೋಳಂಗಡಿ ಶಾಲೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು, ಊರಿನ ವಿದ್ಯಾಭಿಮಾನಿಗಳನ್ನು ಸಂಘ ಸಂಸ್ಥೆಗಳನ್ನು ಆದಷ್ಟು ಶೀಘ್ರದಲ್ಲಿ ಒಟ್ಟು ಸೇರಿಸಿ ಕಾರ್ಯ ಪ್ರವೃತ್ತರಾಗೋಣ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಬುಷ್ರಾ, ಮಾಜಿ ಪುರಸಭಾ ಸದಸ್ಯೆ ವಸಂತಿ ಗಂಗಾಧರ್, ಮಾಜಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಲೀಂ ಬೋಳಂಗಡಿ, ನಿತ್ಯಾನಂದ ಟೈಯರ್ಸ್ ಮಾಲಕ ಲೋಕೇಶ್, ಶ್ರೀನಿವಾಸ್ ಸ್ಟೋರ್ ಮಾಲಕ ಶಿವಾನಂದ, ಕ್ಲಸ್ಟರ್ ನ ವಿವಿಧ ಶಾಲಾ ಮುಖ್ಯ ಶಿಕ್ಷಕರುಗಳಾದ ರೇಖಾ,ಸವಿತಾ,ಕವಿತಾ, ಗ್ರೇಸಿ, ಲವೀನ, ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ ನಗರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುಧಾಕರ್ ಭಟ್ ಕಲಿಕಾ ಹಬ್ಬದ ಉದ್ದೇಶ ಹಾಗೂ ಅದರಿಂದಾಗುವ ಪ್ರಯೋಜನಗಳ ಬಗ್ಗೆ ಪ್ರಸ್ತಾವನೆಗೈದರು.
ಕಲಿಕಾ ಹಬ್ಬದ ಚಟುವಟಿಕೆಗಳಾದ ಗಟ್ಟಿ ಓದು, ಕಥೆ ಹೇಳುವುದು, ಆರೋಗ್ಯ ಮತ್ತು ಪೌಷ್ಟಿಕಾಂಶ, ಸಂತೋಷದಾಯಕ ಗಣಿತ, ರಸಪ್ರಶ್ನೆ, ಚಿತ್ರ ನೋಡಿ ವಿವರಿಸು,ಮಕ್ಕಳು ಮತ್ತು ಪೋಷಕರ ಸಹ ಸಂಬಂಧ ವಲಯ, ಎಂಬ ವಿಶೇಷ ಚಟುವಟಿಕೆಗಳು ನಡೆದವು.
ಸಮಾರೋಪ ಸಮಾರಂಭದಲ್ಲಿ ಬೊಂಡಾಲ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜನಾರ್ದನ್ ಕುಲಾಲ್ ರವರ ಉಪಸ್ಥಿತಿಯಲ್ಲಿ ಕಲಿಕಾ ಹಬ್ಬಕ್ಕೆ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಪೆನ್ನು ಪೆನ್ಸಿಲ್ ರಬ್ಬರ್ಸ್ಕೇಲ್ ಕ್ರೇಯೋನ್ಸ್ ಗಳನ್ನು ಒಳಗೊಂಡ ಪೌಚ್ ಉಡುಗೊರೆಯಾಗಿ ನೀಡಲಾಯಿತು.
ಬಂಟ್ವಾಳ ನಗರ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಶಿಕ್ಷಕರು ಭಾಗವಹಿಸಿ ಚಟುವಟಿಕೆಗಳನ್ನು ನಡೆಸಿಕೊಟ್ಟರು, ಶಾಲಾ ಮುಖ್ಯ ಶಿಕ್ಷಕ ಶ್ರೀಧರ ಪೂಜಾರಿ ಸ್ವಾಗತಿಸಿ, ಬೊಂಡಾಲ ಶಾಲಾ ಮುಖ್ಯ ಶಿಕ್ಷಕಿ ರೇಖಾ ಸಿ ಹೆಚ್ ವಂದಿಸಿದರು, ಬೋಳಂಗಡಿ ಶಾಲಾ ಶಿಕ್ಷಕಿ ರೇಣುಕ ಬಿ ಇ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಅತಿಥಿ ಶಿಕ್ಷಕಿ ಪ್ರಿಯಾ ಸಹಕರಿಸಿದರು.

