ಮಾದಕ ವಸ್ತು ಸೇವನೆ ಮಾಡಿದ್ದ ಆರೋಪದ ಮೇರೆಗೆ ನಗರದ ಬರ್ಕೆ ಮತ್ತು ಉರ್ವ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕೇರಳದ ಎರ್ನಾಕುಲಂ ನಿವಾಸಿ ನಿಖಿಲ್ ಪಿ. ಎಸ್(19) ಎಂಬಾತನನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಲೇಡಿಹಿಲ್ ಬಳಿ ಡಿ.31 ರಂದು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದ ಆತನನ್ನು ವಿಚಾರಣೆಗೆ ಒಳಪಡಿಸಿದಾಗ , ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೇರಳದ ಕೊಲ್ಲಂ ನಿವಾಸಿ ಅಂಬುಜ್ ಎ. (19) ಎಂಬಾತನನ್ನು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆತ ಕೊಟ್ಟಾರ ಚೌಕಿಯಲ್ಲಿ ಸಿಗರೇಟ್ ಸೇದುತ್ತಿದ್ದು , ಪೊಲೀಸರನ್ನು ಕಂಡೊಡನೆ ಸಿಗರೇಟನ್ನು ಚರಂಡಿಗೆ ಎಸೆದಿದ್ದ. ವಿಚಾರಣೆಗೆ ಒಳ ಪಡಿಸಿದಾಗ ಸಿಗರೇಟಿನ ಒಳಗಡೆ ಮಾದಕ ದ್ರವ್ಯ ತುಂಬಿಸಿ ಸೇದುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ.
ಇಬ್ಬರು ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ . ಇಬ್ಬರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ , ಎಂದು ಅಧಿಕಾರಿಗಳು ತಿಳಿಸಿದ್ದಾರೆ.

