ಗುಂಡ್ಯಡ್ಕದ ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನದಲ್ಲಿ “ಅಖಂಡ ಭಜನಾ ಸಪ್ತಾಹ “ದ ಸಂಭ್ರಮ – ಭಜನಾ ಮಂಡಳಿಯ ವಜ್ರ ಮಹೋತ್ಸವ

0
50

ವರದಿ: ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ

ತುಳುನಾಡು : ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಆ ಸುಸಂದರ್ಭದಲ್ಲಿ, ಭಕ್ತಿಯ ಹಣತೆಯನ್ನು ಹಚ್ಚಿದ ಪುಣ್ಯಭೂಮಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತಿಗೆ ಗ್ರಾಮದ ಸಮೀಪದ ‘ಗುಂಡ್ಯಡ್ಕ’.

ಅಂದು ಕರಾಡ ಬ್ರಾಹ್ಮಣ ಸಮಾಜದ ಏಳು ಪ್ರತಿಷ್ಠಿತ ಮನೆತನದ ಹಿರಿಯರು ಸೇರಿ ಬಿತ್ತಿದ ಭಜನಾ ಸಂಕಲ್ಪದ ಬೀಜ, ಇಂದು ಬೃಹದಕಾರವಾಗಿ ಬೆಳೆದು ನಿಂತಿದೆ. ಅಂದು ಆರಂಭಗೊಂಡ ಭಜನಾ ಮಂಡಳಿಯು ಇದೀಗ ಯಶಸ್ವಿ 75 ವರ್ಷಗಳನ್ನು ಪೂರೈಸಿ, 76ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ “ವಜ್ರ ಮಹೋತ್ಸವ” ಹಾಗೂ “ಅಖಂಡ ಭಜನಾ ಸಪ್ತಾಹ”ಕ್ಕೆ ಸಾಕ್ಷಿಯಾಗುತ್ತಿದೆ.

​ಇತಿಹಾಸದ ಹಾದಿ : ಭಜನೆಯಿಂದ ಭವ್ಯ ಮಂದಿರದವರೆಗೆ ಸುಮಾರು ​1947ರಲ್ಲಿ ಪ್ರತಿ ಏಕಾದಶಿಯ ಭಜನೆ ಹಾಗೂ ಕಾರ್ತಿಕ ಹುಣ್ಣಿಮೆಯ ‘ಭಜನ ಮಂಗಳೋತ್ಸವ’ದೊಂದಿಗೆ ಈ ದೈವಿಕ ಪಯಣ ಆರಂಭವಾಯಿತು. ಭಕ್ತರ ತೀವ್ರ ಆಸಕ್ತಿಯ ಫಲವಾಗಿ 1958ರಲ್ಲಿ ಶ್ರೀ ವಿಠೋಬ ಭಜನ ಮಂದಿರ ನಿರ್ಮಾಣಗೊಂಡಿತು. ದೇವಸ್ಥಾನಕ್ಕಾಗಿ ಭೂದಾನ ಮಾಡಿದ ವೇದಮೂರ್ತಿ ಶ್ರೀನಿವಾಸ ಪರಾಡ್ಕರ್ ಅವರ ಗೌರವಾರ್ಥವಾಗಿ ಈ ಪ್ರದೇಶಕ್ಕೆ ‘ಶ್ರೀನಿವಾಸಪುರ’ ಎಂದು ನಾಮಕರಣ ಮಾಡಲಾಯಿತು.

​ಕಾಲಕ್ರಮೇಣ, 2002ರಲ್ಲಿ ಶ್ರೀ ವಿಠ್ಠಲ ರುಕ್ಮಿಣೀ ದೇವರ ಶಿಲಾ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಇದು ಭವ್ಯ ದೇವಸ್ಥಾನವಾಗಿ ಮಾರ್ಪಟ್ಟಿತು. 2020ರಲ್ಲಿ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು ಹಾಗೂ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳವರ ಪವಿತ್ರ ಹಸ್ತಗಳಿಂದ ಪುನಃ ಪ್ರತಿಷ್ಠೆ ಮತ್ತು ಕುಂಭಾಭಿಷೇಕ ನೆರವೇರಿ, ಈ ಕ್ಷೇತ್ರವು ಜಗತ್ಪ್ರಸಿದ್ಧವಾಯಿತು.

​ಧರ್ಮ ಸಮನ್ವಯದ ಕೇಂದ್ರ ಕೇವಲ ಧಾರ್ಮಿಕ ವಿಧಿ ವಿಧಾನಗಳಷ್ಟೇ ಅಲ್ಲದೆ, ಇಲ್ಲಿ ಉಪನಯನ, ವಿವಾಹದಂತಹ ಶುಭ ಕಾರ್ಯಗಳು, ಶತಚಂಡಿಕಾಯಾಗ, ಲಕ್ಷಾರ್ಚನೆ ಹಾಗೂ ಅಷ್ಟಾವಧಾನ ಸೇವೆಗಳು ನಿರಂತರವಾಗಿ ನಡೆಯುತ್ತಿವೆ. ಸಾಂಸ್ಕೃತಿಕವಾಗಿ ಯಕ್ಷಗಾನ, ತಾಳಮದ್ದಲೆ, ಸಂಗೀತ ಹಾಗೂ ಹರಿಕಥೆಗಳ ಮೂಲಕ ಕಲೆ ಮತ್ತು ಸಾಹಿತ್ಯವನ್ನು ಪೋಷಿಸಲಾಗುತ್ತಿದೆ. ವಿಶೇಷವೆಂದರೆ, ಈ ಕ್ಷೇತ್ರವು ಸರ್ವಧರ್ಮೀಯರ ಸಹಭಾಗಿತ್ವದೊಂದಿಗೆ ‘ಧರ್ಮ ಸಮನ್ವಯ’ದ ಶ್ರದ್ಧಾ ಕೇಂದ್ರವಾಗಿ ಬೆಳಗುತ್ತಿದೆ.

​ವಜ್ರ ಮಹೋತ್ಸವದ ವಿಶೇಷ : ಅಖಂಡ ಭಜನಾ ಸಪ್ತಾಹ ಭಜನಾ ಮಂಡಳಿಯ 75 ವರ್ಷಗಳ ನೆನಪಿಗಾಗಿ, ಭಕ್ತರ ಆಶಯದಂತೆ 2026ರ ಜನವರಿ 4ರಿಂದ ಜನವರಿ 11ರ ಸೂರ್ಯೋದಯದವರೆಗೆ ಅಖಂಡ ಭಜನಾ ಸಪ್ತಾಹವನ್ನು ಆಯೋಜಿಸಲಾಗಿದೆ.​

ಸಪ್ತಾಹದ ವಿಶೇಷತೆ: ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯಗಳ ಸುಪ್ರಸಿದ್ಧ ಭಜನಾ ಮಂಡಳಿಗಳಿಂದ ನಿರಂತರ ಸಂಕೀರ್ತನೆ ನಡೆಯಲಿದೆ.​

ಅನ್ನದಾನ: ಕಾರ್ಯಕ್ರಮದ ಉದ್ದಕ್ಕೂ ಆಗಮಿಸುವ ಭಕ್ತಾದಿಗಳಿಗೆ ವಿಶೇಷ ಮಹಾಪ್ರಸಾದ ಹಾಗೂ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕ ಆಮಂತ್ರಣ: ಧರ್ಮ ರಕ್ಷಣೆ ಮತ್ತು ಭಕ್ತಿಯ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಶ್ರೀನಿವಾಸಪುರದ ಈ ಭವ್ಯ ಕಾರ್ಯಕ್ರಮಕ್ಕೆ ಸಮಸ್ತ ಭಗವದ್ಭಕ್ತರು ಸಕ್ರಿಯವಾಗಿ ಪಾಲ್ಗೊಂಡು, ಶ್ರೀ ವಿಠ್ಠಲ ರುಕ್ಮಿಣೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here