ಕಲ್ಲಡ್ಕ : ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಮತ್ತು ಶಿಸ್ತು ಜೀವನದಲ್ಲಿ ಮೂಡಿಸಿಕೊಂಡಾಗ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಪಡೆದು ಉತ್ತಮ ನಾಗರಿಕರಾಗಲು ಸಾಧ್ಯ , ಇದರ ಜವಾಬ್ದಾರಿ ಮಕ್ಕಳ ಪೋಷಕರ ಮೇಲಿದೆ ಎಂದು ಲಯನ್ಸ್ ಕ್ಲಬ್ ವಿಟ್ಲ ಇದರ ಅಧ್ಯಕ್ಷ ರಾದ ಶ್ರೀಯುತ ಸಂಜೀವ ಪೂಜಾರಿ ಹೇಳಿದರು. ಅವರು ಡಿಸೆಂಬರ್ 10 ಶನಿವಾರ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜ ಇಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ, ಹಳೆ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಕಂಪ್ಯೂಟರ್ ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೋಳಿಮಾರ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಕೆಲಿಂಜ ಶಾಲಾ ಬೇಡಿಕೆಯಾದ ನೀರಿನ ಸಮಸ್ಯೆ ಕೂಡಲೇ ಸರಿಪಡಿಸಲಾಗುವುದು, ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ವಾರ್ಷಿಕೋತ್ಸವದ ನಿಮಿತ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ, ಕಲಿಕೆ ಹಾಗೂ ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಶಾಲೆಗೆ ವಿವಿಧ ರೀತಿಯಲ್ಲಿ ಸಹಕರಿಸುತ್ತಿರುವ ದಾನಿಗಳನ್ನು ಹಾಗೂ ಸಹಕಾರ ನೀಡುತ್ತಿರುವವರನ್ನು ಗುರುತಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಮೊದಲು ಇನ್ಪೋಸಿಸ್ ಸಂಸ್ಥೆ ಮುಡಿಪು ವತಿಯಿಂದ ಶಾಲೆಗೆ ನೀಡಿದ ಒಟ್ಟು 8 ಕಂಪ್ಯೂಟರ್ ಗಳ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸಂದೀಪ್ ಪೂಜಾರಿ ಕೆಲಿಂಜ, ಜಯಪ್ರಸಾದ್ ಕಲ್ಮಲೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮೋಹಿತ್ ಶೆಟ್ಟಿ ಮಾಡದಾರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತ್ತಡ್ಕ, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸೀನಾಜೆ, ಹಳೆ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರಾದ ಹಮೀದ್ ಗುಳಿಗದ್ದೆ, ಉಪಾಧ್ಯಕ್ಷರಾದ ಹಮೀದ್ ಗೋಲ್ಡ್ ಸ್ಟಾರ್, ಜಗದೀಶ್ ಶೆಟ್ಟಿ ಕಂಪದಬೈಲು ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕಿ ವನಿತಾ ಸ್ವಾಗತಿಸಿ, ಶಾಲೆಯ ಸವಿಸ್ತಾರವಾದ ವರದಿಯನ್ನು ವಾಚಿಸಿದರು. ಶಿಕ್ಷಕಿರಾದ ಜಯಶ್ರೀ,ಅಶ್ವಿತಾ, ಬಿಂದುಶ್ರೀ, ಬಹುಮಾನಿತರ ಪಟ್ಟಿ ವಾಚಿಸಿ, ಶಿಕ್ಷಕಿ ನಳಿನಾಕ್ಷಿ ವಂದಿಸಿದರು. ಸಹ ಶಿಕ್ಷಕಿ ಉಷಾ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಅಂಗನವಾಡಿ ಮಕ್ಕಳಿಂದ, ಶಾಲಾ ಪೂರ್ವ ಪ್ರಾಥಮಿಕ ಹಾಗೂ 1 ರಿಂದ 8 ನೇ ತರಗತಿ ತನಕದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.


