ವರದಿ:- ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ
ತುಳುನಾಡು ವಾರ್ತೆ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಸನ ಮತ್ತು ನಾಟ್ಯಮಯೂರಿ ನೃತ್ಯ ಟ್ರಸ್ಟ್ ಕೊಡಗು ಇವುಗಳ ಜಂಟಿ ಆಶ್ರಯದಲ್ಲಿ ನೀಡಲಾಗುವ *’ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ’ ಗೆ ಸಾಹಿತಿ, ಪತ್ರಕರ್ತೆ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆಯಾಗಿದ್ದಾರೆ.
ಕಳೆದ 21 ವರ್ಷಗಳಿಂದ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಇವರು, ‘ಅಮೃತ ಪ್ರಕಾಶ’ ಪತ್ರಿಕೆಯ ಮೂಲಕ 13 ವರ್ಷಗಳಿಂದ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಇವರು 9 ಕೃತಿಗಳನ್ನು ರಚಿಸಿದ್ದು, ತಮ್ಮ ಪತ್ರಿಕೆಯ ಮೂಲಕ ಇತರ ಲೇಖಕರ 49 ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಅಲ್ಲದೆ, ಶಾಲಾ-ಕಾಲೇಜುಗಳಲ್ಲಿ ‘ಉಚಿತ ಸಾಹಿತ್ಯ ಅಭಿರುಚಿ’ ಕಾರ್ಯಕ್ರಮ ನಡೆಸಿ ದಾಖಲೆ ನಿರ್ಮಿಸಿದ್ದಾರೆ.
ಜನವರಿ 18ರಂದು ಹಾಸನದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯುವ ವಿವೇಕಾನಂದ ಜಯಂತಿ ಉತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾಲತಿ ಶೆಟ್ಟಿ ಅವರು ಯಕ್ಷಗಾನ ಕಲಾವಿದ ದಿ. ಕಿಟ್ಟಣ್ಣ ಶೆಟ್ಟಿ ಮಾಣೂರು ಅವರ ಪುತ್ರಿಯಾಗಿದ್ದಾರೆ.

