ಉಡುಪಿ : ಎಕ್ಸ್‌ಫಿನೊ ಸೆಂಟರ್ ಆಫ್ ಎಕ್ಸಲೆನ್ಸ್ ವಿಸ್ತರಣೆ – ‘ಸಿಲಿಕಾನ್ ತೀರ’ಕ್ಕೆ ಜಾಗತಿಕ ಮಾನ್ಯತೆ

0
33

ಉಡುಪಿ, ಜನವರಿ 14 : ಕರ್ನಾಟಕದ ಕರಾವಳಿಯನ್ನು ಜಾಗತಿಕ ಪ್ರತಿಭಾ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇರಿಸಿರುವ ಸ್ಪೆಷಲಿಸ್ಟ್ ಸ್ಟಾಫಿಂಗ್ ಸಂಸ್ಥೆ ‘ಎಕ್ಸ್‌ಫಿನೊ’ (Xpheno), ಉಡುಪಿಯಲ್ಲಿನ ತನ್ನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಅನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಸಂಸ್ಥೆಯು ತನ್ನ ಕಾರ್ಯಾಚರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದ್ದು, ಈಗ 250 ಆಸನಗಳ ಬೃಹತ್ ಸೌಲಭ್ಯದೊಂದಿಗೆ ಸಜ್ಜಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಸ್ಥ ಫ್ರಾನ್ಸಿಸ್‌ ಪದ್ಮದನ್‌ ಸಹ ಸಂಸ್ಥಾಪಕರಾದ ಅನಿಲ್‌ ಎತನೂರ್‌ ಹಾಗೂ ಕಮಲ್‌ ಕಾರಂತ್ ಉಪಸ್ಥಿತರಿದ್ದರು.

ಜಾಗತಿಕ ಸಾಮರ್ಥ್ಯ ಕೇಂದ್ರಗಳಿಂದ (GCC) ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಈ ವಿಸ್ತರಣೆ ಸಹಕಾರಿಯಾಗಿದೆ. 2024ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ಈ ಕೇಂದ್ರವು ಇದುವರೆಗೆ ಐಟಿ ಮತ್ತು ಐಟಿಯೇತರ ಕ್ಷೇತ್ರಗಳಲ್ಲಿ 1,050ಕ್ಕೂ ಹೆಚ್ಚು ನೇಮಕಾತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಬೆಂಗಳೂರು, ಮುಂಬೈ, ಹೈದರಾಬಾದ್ ಮಾತ್ರವಲ್ಲದೆ ದುಬೈ ಮಾರುಕಟ್ಟೆಗೂ ಈ ಕೇಂದ್ರವು ಸೇವೆ ನೀಡುತ್ತಿದೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಹಯೋಗದೊಂದಿಗೆ ಬಿಡುಗಡೆಯಾದ ವರದಿಯ ಪ್ರಕಾರ, ಉಡುಪಿ-ಮಂಗಳೂರು ಭಾಗದಲ್ಲಿ 3.10 ಲಕ್ಷಕ್ಕೂ ಹೆಚ್ಚು ಪ್ರತಿಭಾವಂತ ವೃತ್ತಿಪರರಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಎಕ್ಸ್‌ಫಿನೊ ಈ ಪ್ರದೇಶವನ್ನು ‘ಸಿಲಿಕಾನ್ ಬೀಚ್’ ಆಗಿ ರೂಪಿಸಲು ಮುಂದಾಗಿದೆ.

ಸಂಸ್ಥೆಯ ಸಹ-ಸಂಸ್ಥಾಪಕ ಕಮಲ್ ಕಾರಂತ್ ಐರೋಡಿ ಮಾತನಾಡಿ, “ನಮ್ಮ ತಂಡದಲ್ಲಿ 50% ಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ. ವಿಶೇಷವೆಂದರೆ, ಇಲ್ಲಿನ ಶೇ. 80ರಷ್ಟು ಸಿಬ್ಬಂದಿ ನೇಮಕಾತಿ ಹಿನ್ನೆಲೆ ಇಲ್ಲದವರಾಗಿದ್ದು, ಅವರಿಗೆ ಸೂಕ್ತ ತರಬೇತಿ ನೀಡಿ ತಜ್ಞರನ್ನಾಗಿ ರೂಪಿಸಲಾಗಿದೆ” ಎಂದು ಹೆಮ್ಮೆ ವ್ಯಕ್ತಪಡಿಸಿದರು. ಮತ್ತೊಬ್ಬ ಸಹ-ಸಂಸ್ಥಾಪಕ ಅನಿಲ್ ಕುಮಾರ್ ಎತನೂರ್ ಅವರು ಸ್ಥಳೀಯ ನಾಯಕತ್ವ ಮತ್ತು ಮೂಲಸೌಕರ್ಯದ ಶ್ರೇಷ್ಠತೆಯನ್ನು ಶ್ಲಾಘಿಸಿದರು.

ಮಹಾನಗರಗಳನ್ನು ಮೀರಿ ಬೆಳೆಯುತ್ತಿರುವ ಈ ಕೇಂದ್ರವು ಸ್ಥಳೀಯ ಯುವಜನತೆಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸುವುದಲ್ಲದೆ, ಕರ್ನಾಟಕದ ಡಿಜಿಟಲ್ ಆರ್ಥಿಕತೆಗೆ ದೊಡ್ಡ ಬಲ ತುಂಬಲಿದೆ.

LEAVE A REPLY

Please enter your comment!
Please enter your name here