ಯುವ ಸಮುದಾಯ ರಕ್ತದಾನದಲ್ಲಿ ಪಾಲ್ಗೊಂಡಾಗ ಜಾಗೃತ ಸಮಾಜ ನಿರ್ಮಾಣ ಸಾಧ್ಯ : ಭಾಸ್ಕರ್ ರಾವ್
ಯುವರಕ್ತ ನಿಧಿ ಬೆಳ್ಳಾರೆ ಇದರ ಉದ್ಘಾಟನಾ ಕಾರ್ಯಕ್ರಮ ಹಾಗೂ ರಕ್ತ ದಾನ ಶಿಬಿರವು ಬೆಳ್ಳಾರೆ ಸಿ ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಐ ಪಿ ಎಸ್ ಅಧಿಕಾರಿ ಹಾಗೂ ರೆಡ್ ಕ್ರಾಸ್ ಸೊಸೈಟಿ ಕರ್ನಾಟಕ ಇದರ ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂತಹ ಒಂದು ಗ್ರಾಮೀಣ ಭಾಗದಲ್ಲಿ ಮೊದಲ ಬಾರಿ ರಕ್ತ ದಾನ ಮಾಡುವವರನ್ನು ಗುರುತಿಸಿ ಅವರಿಂದ ರಕ್ತದಾನ ಮಾಡಿಸುವುದು ಯುವಸಮುದಾಯಕ್ಕೆ ಪ್ರೇರಣೆ ಸಿಕ್ಕಂತಾಗಿದೆ. ಇದಕ್ಕಾಗಿ ಆರ್. ಕೆ ಭಟ್ ತಂಡವನ್ನು ಮೊದಲಾಗಿ ಅಭಿನಂದಿಸುತ್ತೇನೆ ಎಂದರು.
ಯುವ ರಕ್ತ ನಿಧಿ ಬೆಳ್ಳಾರೆ ಇದರ ಸ್ಥಾಪಕರಾದ ಆರ್ .ಕೆ .ಭಟ್ ಪ್ರಾಸ್ತಾವಿಕ ಮಾತನಾಡಿ ನಮ್ಮ ಗ್ರಾಮಕ್ಕೆ ನಮ್ಮದೇ ರಕ್ತ ಅನ್ನುವ ಧ್ಯೇಯ ಇಟ್ಟುಕೊಂಡು ಇದನ್ನು ಮಾಡಿದ್ದೇವೆ. ಜಾತಿ, ಮತ, ಧರ್ಮವನ್ನು ಮೀರಿದ ಸಂಬಂಧ ರಕ್ತ ನೀಡುವುದರಲ್ಲಿ ಆಗುತ್ತದೆ. ಪರಸ್ಪರ ಭಾಂದವ್ಯ ಬೆಳೆದು ಒಂದು ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಪ್ರಾದೇಶಿಕ ರಕ್ತ ವರ್ಗಾವಣೆ ಕೇಂದ್ರ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಇದರ ಹಿರಿಯ ರೋಗ ಶಾಸ್ತ್ರಜ್ಞರಾದ ಡಾ. ಶರತ್ ಕುಮಾರ್ ರಾವ್ ಮಾತನಾಡಿ ರಕ್ತ ಯಾರು ಯಾವ ಸಂದರ್ಭದಲ್ಲಿ ನೀಡಬೇಕು ಅನ್ನುವ ಮಾಹಿತಿ ನೀಡಿದರು.ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸದಸ್ಯರಾದ ಡಾ. ಮುರಳಿಮೋಹನ್ ಚೂಂತಾರು ಮಾತನಾಡಿ ದೇಶದಲ್ಲಿ ಒಟ್ಟು ಯೋಚನೆ ಮಾಡಿದಾಗ ರಕ್ತ ನೀಡುವವರ ಸಂಖ್ಯೆ ಕಡಿಮೆ ಇದೆ. ರಕ್ತದಾನದ ಬಗ್ಗೆ ಅರಿವು ಅಗತ್ಯವಿದೆ ಎಂದರು.
ರೆಡ್ ಕ್ರಾಸ್ ಸೊಸೈಟಿ ಸುಳ್ಯ ಇದರ ಸಭಾಪತಿಗಳಾದ ಪಿ. ಬಿ ಸುಧಾಕರ್ ರೈ ಮಾತನಾಡಿ ರಕ್ತದಾನ ಮಾಡಲು ಅಂಜಿಕೆ ಬೇಡ, ನೂರು ಬಾರಿ ರಕ್ತ ಕೊಟ್ಟ ಅನುಭವ ನನಿಗಿದೆ. ನನ್ನ ಇಡೀ ಕುಟುಂಬವೇ ರಕ್ತದಾನದಲ್ಲಿ ಪಾಲ್ಗೊಂಡಿದೆ ಎಂದು ಹೇಳಲು ಹೆಮ್ಮೆ ಇದೆ. ಇಂತಹ ಒಂದು ಶಿಬಿರ ಮಾಡುವ ಮೂಲಕ ಆರ್. ಕೆ. ಭಟ್ ರವರು ಭಗವಂತ ಮೆಚ್ಚುವ ಕೆಲಸ ಮಾಡಿದ್ದಾರೆ ನಿಮಗೆ ಅಭಿನಂದನೆಗಳು ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್ ರೈ ಕಾರ್ಯಕ್ರಮದಲ್ಲಿ ಡಾ. ಮುರಳಿಮೋಹನ್ ಚೂಂತಾರು, ಸುಧಾಕರ್ ರೈ ಪಿ ಬಿ ಹಾಗೂ ಪ್ರತೀಕ್ ಕುಲಾಲ್ ಇವರನ್ನು ಸನ್ಮಾನಿಸಲಾಯಿತು. ಮೊದಲು ರಕ್ತ ದಾನ ಮಾಡಿದ ದಾನಿಗಳನ್ನು ಗುಲಾಬಿ ಹೂ ನೀಡಿ ಗೌರವಿಸಲಾಯಿತು. ಬೆಳಿಗ್ಗೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಬೂಡು ಪಾಟಾಜೆ ಇವರಿಂದ ಸಂಗೀತ ರಸಮಂಜರಿ ನಡೆಯಿತು.89ಜನರು ರಕ್ತದಾನ ಮಾಡಿದರು. ಪ್ರಾದೇಶಿಕ ರಕ್ತ ವರ್ಗಾವಣೆ ಕೇಂದ್ರ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ವೈದ್ಯರ ತಂಡ ಶಿಬಿರ ನಡೆಸಿಕೊಟ್ಟರು. ಯುವ ರಕ್ತ ನಿಧಿ ನಿರ್ವಹಣಾ ಸಮಿತಿಯ ಆರ್ ಕೆ ಭಟ್ ಸ್ವಾಗತಿಸಿ, ನಿಶ್ಮಿತಾ ಬೆಳ್ಳಾರೆ ಧನ್ಯವಾದವಿತ್ತರು. ಪ್ರದೀಪ್ ಕುಮಾರ್ ರೈ ಪನ್ನೆ ನಿರೂಪಿಸಿದರು.

