ಉಳ್ಳಾಲ : ಕೇರಳ ಸರಕಾರ ಜಾರಿಗೆ ತಂದಿರುವ ಮಲಯಾಳಂ ಕಡ್ಡಾಯ ಕಲಿಕೆಯ ಮಸೂದೆಯು ಕನ್ನಡ ಪ್ರದೇಶವಾಗಿರುವ ಗಡಿನಾಡು ಕಾಸರಗೋಡಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಭಾರೀ ಆಘಾತವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಕೇರಳ ಹಾಗೂ ಕರ್ನಾಟಕ ಸರಕಾರಗಳು ಪರಸ್ಪರ ಮಾತುಕತೆಯ ಮೂಲಕ ಕಾಸರಗೋಡಿನ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ಒತ್ತಾಯಿಸಿದೆ.
ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಅಚ್ಛಗನ್ನಡದ ನೆಲವಾದ ಕಾಸರಗೋಡು ಅನ್ಯಾಯವಾಗಿ ಕೇರಳ ರಾಜ್ಯದ ಭಾಗವಾದಾಗ, ಇಲ್ಲಿ ವಾಸಿಸುವ ಕನ್ನಡಿಗರಿಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಕೇರಳ ಸರಕಾರ ಭರವಸೆ ನೀಡಿತ್ತು. ಆದರೆ ಇದೀಗ ಏಕಾಏಕಿ ಮಲಯಾಳಂ ಕಡ್ಡಾಯ ಕಲಿಕೆಯ ಮಸೂದೆಯನ್ನು ಜಾರಿ ಮಾಡಿರುವುದು ಕನ್ನಡ ಭಾಷೆಯ ಸ್ಪಷ್ಟ ಅವಗಣನೆಯಾಗಿದೆ. ಇದು ಖಂಡನೀಯ ಎಂದು ಪರಿಷತ್ತು ತಿಳಿಸಿದೆ.
ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಉಂಟಾದ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಕೇಂದ್ರ ಸರಕಾರ ನೇಮಿಸಿದ್ದ ಮಹಾಜನ ಆಯೋಗವು ಕಾಸರಗೋಡು ಕನ್ನಡನಾಡಾಗಿದ್ದು, ಅದನ್ನು ಮರಳಿ ಕರ್ನಾಟಕದ ಭಾಗವಾಗಿಸಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಈ ವರದಿ ಇಂದಿಗೂ ಜಾರಿಯಾಗದೆ ಧೂಳು ಹಿಡಿದು ಉಳಿದಿದೆ. ಮಹಾಜನ ವರದಿಯನ್ನು ಜಾರಿ ಮಾಡುವುದಕ್ಕೆ ಇದು ಸಕಾಲವಾಗಿದ್ದು, ಅದು ಸಾಧ್ಯವಾಗದಿದ್ದಲ್ಲಿ ಕೇಂದ್ರ ಸರಕಾರ ತಕ್ಷಣ ಮಧ್ಯಪ್ರವೇಶಿಸಿ ಕಾಸರಗೋಡಿನ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ಕಳೆದ ಹಲವು ವರ್ಷಗಳಿಂದ ಕನ್ನಡದ ಮೇಲೆ ನಿರಂತರ ಆಘಾತಗಳು ನಡೆಯುತ್ತಿವೆ. ಊರುಗಳ ಹೆಸರಿನ ಮಲಯಾಳೀಕರಣ, ಶಾಲೆಗಳಲ್ಲಿ ಮಲಯಾಳೀ ಶಿಕ್ಷಕರ ನೇಮಕ, ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಮುಂತಾದವುಗಳಿಂದಾಗಿ ಇಲ್ಲಿನ ಜನರು ಅನಿವಾರ್ಯವಾಗಿ ಕನ್ನಡದ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಮಲತಾಯಿ ಧೋರಣೆಯನ್ನು ಕೇರಳ ಸರಕಾರ ತಕ್ಷಣ ನಿಲ್ಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
