ಲಿಖಿತ್ ಎಲ್ ಎನ್ ಸಾರಡ್ಕ್ ಇವರಿಗೆ 2026 ನೇ ಸಾಲಿನ ಶ್ರೇಷ್ಠ ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವರ್ಡ್

0
29

ಸಾರಡ್ಕ (ಬಂಟ್ವಾಳ): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ಪೋಸ್ಟ್‌ನ ಸಾರಡ್ಕ (ಬೆಟ್ಟುಗದ್ದೆ) ನಿವಾಸಿ, ಬಾಲಪ್ರತಿಭೆ ಲಿಖಿತ್ ಎಲ್ ಎನ್ ಸಾರಡ್ಕ್ (ಲಿಖಿತ್ ನಾಯ್ಕ) ಅವರು 2026ನೇ ಸಾಲಿನ ಶ್ರೇಷ್ಠ ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ.

ಕನ್ನಡ ಭವನ ಹಾಗೂ ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ವೇದಿಕೆ ವತಿಯಿಂದ ಕಾಸರಗೋಡು ಜಿಲ್ಲೆಯಲ್ಲಿ ಆಯೋಜಿಸಲಾದ ರಜತ ಸಂಭ್ರಮ ನಾಡು–ನುಡಿ ಹಬ್ಬ ಕಾರ್ಯಕ್ರಮದಲ್ಲಿ 18-01-2026 ರಂದು ಈ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಾಧನೆ ಊರು-ಗ್ರಾಮ ಮಾತ್ರವಲ್ಲದೆ ಜಿಲ್ಲೆಯ ಸಾಹಿತ್ಯಾಸಕ್ತರಲ್ಲಿ ಅಪಾರ ಸಂತಸ ತಂದಿದೆ.

ಲಿಖಿತ್ ನಾಯ್ಕ ಅವರು ನಾರಾಯಣ ಹಾಗೂ ಲೀಲಾವತಿ ದಂಪತಿಯ ಪುತ್ರರಾಗಿದ್ದು, ಪ್ರಸ್ತುತ ಅಳಿಕೆ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ, ಸಂಗೀತ ಹಾಗೂ ಯಕ್ಷಗಾನ ಎಂಬ ತ್ರಿಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಬಾಲಕವಿಯಾಗಿ ಗುರುತಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು 25-05-2025 ರಂದು ಬಳ್ಳಾರಿ ಜಿಲ್ಲೆಯ ತಾಳೂರಿನಲ್ಲಿ ನಡೆದ ನಕ್ಷತ್ರ ಸಾಹಿತ್ಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಸಾಹಿತ್ಯ ವೇದಿಕೆಯಿಂದ ಪ್ರತಿಷ್ಠಿತ ರಾಷ್ಟ್ರೀಯ ಸಾಹಿತ್ಯ ನವಚೇತನ ರಾಷ್ಟ್ರ ಪ್ರಶಸ್ತಿ ಲಿಖಿತ್ ಅವರಿಗೆ ಲಭಿಸಿತ್ತು. ಅಲ್ಲದೇ 15-06-2025 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಆರ್.ಪಿ. ಕಲಾ ಸೇವಾ ಟ್ರಸ್ಟ್ ವತಿಯಿಂದ ಅಂತರ್ ರಾಜ್ಯ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿ ದೊರಕಿದ್ದು, ಇದು ಅವರ ಎರಡನೇ ಪ್ರಮುಖ ಗೌರವವಾಗಿತ್ತು.

ಪ್ರತಿನಿತ್ಯ ಕವನ, ಗಜಲ್, ಕಥೆ, ಲೇಖನ ಸೇರಿದಂತೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ನಿರಂತರವಾಗಿ ಸೃಜನಶೀಲರಾಗಿರುವ ಲಿಖಿತ್, ರಾಜ್ಯಾದ್ಯಂತ ನಡೆಯುವ ಸಾಹಿತ್ಯ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮುಂದುವರೆಸುತ್ತಿರುವ ಈ ಬಾಲಪ್ರತಿಭೆಯ ಸಾಧನೆ ಯುವ ಪೀಳಿಗೆಗೆ ಪ್ರೇರಣೆಯಾಗಿದೆ. ಲಿಖಿತ್ ಅವರ ಮುಂದಿನ ಸಾಹಿತ್ಯಯಾನ ಇನ್ನಷ್ಟು ಎತ್ತರಕ್ಕೇರಲಿ ಎಂಬುದು ಅಭಿಮಾನಿಗಳು ಹಾಗೂ ಸಾಹಿತ್ಯಾಸಕ್ತರ ಹಾರೈಕೆ.

LEAVE A REPLY

Please enter your comment!
Please enter your name here