ಬಂಟ್ವಾಳ: ಇಲ್ಲಿನ ಅರಳ ಮತ್ತು ಕೊಯಿಲ ಗ್ರಾಮಗಳ ಗ್ರಾಮದೇವತೆ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಜ.27ರಿಂದ ಫೆ. 1 ರತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.
ಕ್ಷೇತ್ರದ ತಂತ್ರಿ ನಡ್ವಂತಾಡಿ ಉದಯ ಪಾಂಗಣ್ಣಾಯ ಇವರ ಮಾರ್ಗದರ್ಶನದಲ್ಲಿ ಜ.27ರಂದು ಬೆಳಿಗ್ಗೆ ಗಂಟೆ 9.35ಕ್ಕೆ ಕುಂಟ ಮುಹೂರ್ತ ಮತ್ತು ಸಂಜೆ ಧ್ವಜಾರೋಹಣ, ಸಂಜೆ 6.30ಕ್ಕೆ ಭಜನೆ ಬಳಿಕ ಕಟೀಲು ಮೇಳದಿಂದ ‘ ಶ್ರೀ ರಾಮಾಶ್ವಮೇಧ’ ಯಕ್ಷಗಾನ ಬಯಲಾಟ ನಡೆಯಲಿದೆ.
ಜ.28ರಂದು ರಾತ್ರಿ ದೀಪದ ಬಲಿ ಉತ್ಸವ, ಸಂಜೆ ಗಂಟೆ 6.30ಕ್ಕೆ ಭಜನೆ ಮತ್ತು ‘ಸಂಗೀತ ಗಾನ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ.29 ರಂದು ನಡುಬಲಿ ಉತ್ಸವ ಮತ್ತು ಚಂದ್ರ ಮಂಡಲೋತ್ಸವ, ಸಂಜೆ ಗಂಟೆ 6.30ಕ್ಕೆ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ.30ರಂದು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಸಂಜೆ ಗಂಟೆ 6.30ಕ್ಕೆ ಭಜನೆ, 7 ಗಂಟೆಗೆ ಮಹಾ ರಥೋತ್ಸವ, ರಂಗಪೂಜೆ, 8 ಗಂಟೆಗೆ ‘ಗೀತಾ ಸಾಹಿತ್ಯ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ.31ರಂದು ಬೆಳಿಗ್ಗೆ ಚಂಡಿಕಾಯಾಗ, 9 ಗಂಟೆಗೆ ತುಲಾಭಾರ ಸೇವೆ, ಸಂಜೆ ಗಂಟೆ 6.30ಕ್ಕೆ ಭಜನೆ, 7.30ಕ್ಕೆ ದೇವರ ಬಲಿ ಉತ್ಸವ, ಧ್ವಜಾವರೋಹಣ, ಧೂಮಾವತಿ ಮತ್ತು ಮಹಿಷಂದಾಯ ದೈವಗಳ ನೇಮೋತ್ಸವ, 8ಗಂಟೆಗೆ ಸ್ಥಳೀಯ ಗುಡ್ಡೆಯಂಗಡಿ ವಿದ್ಯಾ ರ್ಗಥಿಗಳಿಂದ ‘ಯಕ್ಷಗಾನ ಬಯಲಾಟ’ ಪ್ರದರ್ಶನಗೊಳ್ಳಲಿದ್ದು, ಫೆ.1ರಂದು ಸಂಪ್ರೋಕ್ಷಣೆ ಮತ್ತು ಮಂತ್ರಾಕ್ಷತೆಯೊಂದಿಗೆ ಜಾತ್ರೆ ಸಮಾಪನಗೊಳ್ಳಲಿದೆ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ ತಿಳಿಸಿದ್ದಾರೆ.
