ಉಡುಪಿ : ಮಕ್ಕಳ ಜೊತೆ ವ್ಯವಹರಿಸುವ ಅಧಿಕಾರಿ ಮತ್ತು ಸಿಬ್ಬಂದಿ ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳಬೇಕು. ಮಕ್ಕಳ ಜೊತೆ ಸಂವೇದನಾಶೀಲತೆಯಿಂದ ವ್ಯವಹರಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.
ರಜತಾದ್ರಿಯ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಪಾಲನ ಸಂಸ್ಥೆಗಳ ಅಧಿಕಾರಿ ಹಾಗೂ ಸಿಬ್ಬಂದಿಗೆ ಮಕ್ಕಳ ರಕ್ಷಣೆಯ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ರಾಜ್ಯದ 5,970 ಗ್ರಾಮಗಳಲ್ಲಿಯೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈಗಾಗಲೇ 26 ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮ ಪೂರ್ಣಗೊಂಡಿದೆ. ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ಜೊತೆ ಸಂವಾದ ನಡೆಸಿ ಅವರ ಸಮಸ್ಯೆ, ಅಹವಾಲುಗಳನ್ನು ಆಲಿಸಲಾಗಿದೆ ಎಂದರು.
ಮಕ್ಕಳ ಜೀವನದ ಆಶಾಕಿರಣವಾಗಿ ಆರೈಕೆ ಮತ್ತು ಪುನರ್ವಸತಿ ಪ್ರಕ್ರಿಯೆಗಳನ್ನು ರೂಪಿಸಬೇಕು ಮಕ್ಕಳ ಸಮಸ್ಯೆಗಳನ್ನು ನೋಡುವ ಮತ್ತು ಅವರ ಜೊತೆ ವ್ಯವಹರಿಸುವ ಮನೋಭಾವ ಬದಲಾಗಬೇಕು. ಮಕ್ಕಳಿಗೆ ಸಂಬಂಧಿಸಿದ ಮನೋವೈಜ್ಞಾನಿಕ ಪುಸ್ತಕಗಳನ್ನು ಹೆಚ್ಚು ಓದಿದಾಗ ಮನೋಭಾವನೆಯಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನಾ ನಿರ್ದೇಶಕಿ ಹಲಿಮಾ ಮಾತನಾಡಿ, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬಾಲನ್ಯಾಯ ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ಮಕ್ಕಳಿಗೆ ಸಂಬಂಧಿಸಿದ ದೂರುಗಳನ್ನು ಬರೆಯುವಾಗ ಸ್ಪಷ್ಟತೆ ಇರಬೇಕು. ಮಕ್ಕಳ ಬಗ್ಗೆ ತಾತ್ಸಾರ ಮಾಡದೆ ತಮ್ಮದೇ ಮಕ್ಕಳು ಎಂಬ ರೀತಿಯಲ್ಲಿ ಪ್ರೀತಿ, ಕಾಳಜಿ ಸಂವೇದನೆ ತೋರಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ. ಪ್ರಭು ಡಿ.ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅನುರಾಧಾ ಹಾದಿಮನಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜೂಹಿ ದಾಮೋದರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಭಾನುಮತಿ, ಮಕ್ಕಳ ರಕ್ಷಣಾ ಘಟಕದ ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.

