ಮಂಗಳೂರು : ಇಲಾಖೆಯಲ್ಲಿ ನಡೆದಿದೆಯೆನ್ನಲಾದ ಬಾರ್ ಲೈಸನ್ಸ್ ನೀಡಿಕೆಯಲ್ಲಿ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಸಚಿವ ಆರ್.ಬಿ. ತಿಮ್ಮಾಪುರರ ಪಾತ್ರ ಕಿಂಚಿತ್ತೂ ಇಲ್ಲ. ಆದರೂ ವಿರೋಧ ಪಕ್ಷದ ಬಿಜೆಪಿ ನಾಯಕರು ವೃಥಾ ಸಚಿವರ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಆದಿ ಜಾಂಬವ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಪೂಜಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವರು ದಕ್ಷತೆ, ಪ್ರಾಮಾಣಿಕತೆಯಿಂದ ಅಬಕಾರಿ ಇಲಾಖೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದು, ಅವರ ಏಳಿಗೆ ಸಹಿಸದೇ ವಿರೋಧಿಗಳು ಷಡ್ಯಂತ್ರ ರೂಪಿಸಿದ್ದಾರೆ. ತಿಮ್ಮಾಪುರ ಅವರೊಬ್ಬ ದಲಿತರಾಗಿರುವುದರಿಂದ ಅವರನ್ನು ಸಿಲುಕಿಸಲು ಕುತಂತ್ರ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವರು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಅಧಿಕಾರಿಯ ಪಾತ್ರವಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ತಪ್ಪೆಸಗಿಲ್ಲ. ಆ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಮಿಗಿಲಾಗಿ ‘ಉಪ್ಪು ತಿಂದವರು ನೀರು ಕುಡಿಯಲೇಬೇಕು” ಎಂದು ಸ್ವತಃ ಸಚಿವ ತಿಮ್ಮಾಪುರ ಅವರೇ ಹೇಳಿದ್ದಾರೆ. ಆದರೂ ಬಿಜೆಪಿಯವರು ಈ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಸಚಿವ ತಿಮ್ಮಾಪುರ ಅವರು ಯಾವುದೇ ಕಾರಣಕ್ಕೂ ವಿರೋಧ ಪಕ್ಷದ ಷಡ್ಯಂತ್ರಕ್ಕೆ ಮಹತ್ವ ನೀಡಬಾರದು. ಇಡೀ ದಲಿತ ಸಮುದಾಯ. ಅದರಲ್ಲೂ ಮಾದಿಗೆ ಸಮಾಜ ಅವರೊಟ್ಟಿಗಿದೆ. ಒಂದೊಮ್ಮೆ ವಿರೋಧ ಪಕ್ಷದವರು ಸಚಿವರ ವಿರುದ್ಧ ಕುತಂತ್ರ ಮುಂದುವರಿಸಿದರೆ ಇಡೀ ಸಮಾಜವೇ ಬೀದಿಗಿಳಿದು ಹೋರಾಡಲಿದೆ ಎಂದು ಅಶೋಕ್ ಪೂಜಾರ್ ಎಚ್ಚರಿಸಿದ್ದಾರೆ.

