ರಾಷ್ಟ್ರಧ್ವಜಕ್ಕೆ ಆಗುವ ಅಪಮಾನ ತಡೆಯಲು ಹಿಂದೂ ಜನಜಾಗೃತಿ ಸಮಿತಿಯ ಮನವಿ

0
22

ಮಂಗಳೂರು : ರಾಷ್ಟ್ರಧ್ವಜವು ರಾಷ್ಟ್ರದ ಆತ್ಮವಾಗಿದೆ. ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26 ರಂದು ರಾಷ್ಟ್ರಧ್ವಜಗಳನ್ನು ಅತ್ಯಂತ ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಧ್ವಜಗಳು ರಸ್ತೆ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತಿದೆ. ಪ್ಲಾಸ್ಟಿಕ್ ಧ್ವಜಗಳು ತಕ್ಷಣವೇ ನಾಶವಾಗದ ಕಾರಣ, ರಾಷ್ಟ್ರಧ್ವಜಗಳು ಅನೇಕ ದಿನಗಳವರೆಗೆ ಅಗೌರವವನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜಕ್ಕೆ ಆಗುವ ಅಪಮಾನವನ್ನು ತಡೆಯಲು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಹಾಗೂ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿಯ ಆಡಳಿತ ಅಧೀಕ್ಷಕರಾದ ಜಾಕ್ಲಿನ್ ಅವರ ಮೂಲಕ ಈ ಮನವಿಯನ್ನು ಹಸ್ತಾಂತರಿಸಲಾಯಿತು. ಪ್ಲಾಸ್ಟಿಕ್ ರಾಷ್ಟ್ರಧ್ವಜದಿಂದ ಆಗುವ ಅವಮಾನವನ್ನು ನಿಲ್ಲಿಸುವಂತೆ ಮುಂಬೈ ಹೈಕೋರ್ಟ್ ಈಗಾಗಲೇ ಸರ್ಕಾರಕ್ಕೆ ಆದೇಶ ನೀಡಿದ್ದು, ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಗೃಹ ಹಾಗೂ ಶಿಕ್ಷಣ ಇಲಾಖೆಗಳು ಈಗಾಗಲೇ ಸುತ್ತೋಲೆಗಳನ್ನು ಹೊರಡಿಸಿವೆ. ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವುದು ‘ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆ) ಕಾಯಿದೆ 1950’ ಮತ್ತು ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆ 1971’ ರ ಅಡಿಯಲ್ಲಿ ಕಾನೂನುಬದ್ಧ ಅಪರಾಧವಾಗಿದೆ. 
ಹಿಂದೂ ಜನಜಾಗೃತಿ ಸಮಿತಿಯು ಕಳೆದ ಅನೇಕ ವರ್ಷಗಳಿಂದ ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸ, ಕರಪತ್ರ ವಿತರಣೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ರಾಷ್ಟ್ರಧ್ವಜದ ಗೌರವ ಕಾಪಾಡುವ ಕುರಿತು ನಿರಂತರ ಜನಜಾಗೃತಿ ಮೂಡಿಸುತ್ತಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ‘ರಾಷ್ಟ್ರ ಧ್ವಜ ಗೌರವ ಕೃತಿ ಸಮಿತಿ’ಯನ್ನು ಕೂಡಲೇ ಸ್ಥಾಪಿಸಬೇಕು, ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ತಯಾರಿಸಿ ಮಾರಾಟ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲಾ ಶಾಲೆಗಳಲ್ಲಿ ‘ರಾಷ್ಟ್ರಧ್ವಜವನ್ನು ಗೌರವಿಸಿ’ ಎಂಬ ಉಪಕ್ರಮವನ್ನು ನಡೆಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಸಮಿತಿಯು ಆಗ್ರಹಿಸಿದೆ. 

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಉಪೇಂದ್ರ ಆಚಾರ್ಯ, ಸುಧಾಕರ್, ನ್ಯಾಯವಾದಿಗಳಾದ ತೀರ್ಥೇಶ್ ಬಲ್ಯ, ಹಿಂದೂ ಸೇವಾ ಸಮಿತಿಯ ಯೋಗೀಶ್ ರೈ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ದಿನಕರ್ ಪೂಜಾರಿ, ಹಿಂದುತ್ವವಾದಿಗಳಾದ ಚಂದ್ರಕಾಂತ್ ಕಾಮತ್, ಹರೀಶ್, ರಾಜೇಂದ್ರ ಪೇಜಾವರ, ಲಕ್ಷ್ಮೀಕಾಂತ್ ಹಾಗೂ ಭಾಸ್ಕರ್ ಆಚಾರ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here