ವರದಿ – ರಾಯಿ ರಾಜ ಕುಮಾರ
ಸ್ಥಾನಿಕ ಬ್ರಾಹ್ಮಣ ಮಹಾಮಂಡಲ, ಸುಬ್ರಹ್ಮಣ್ಯ ಸಭಾ, ಪುತ್ತೂರು ಶಿವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅತಿಥ್ಯದಲ್ಲಿ ಜನವರಿ 24 ಹಾಗೂ 25ರಂದು ಸ್ಥಾನಿಕ ಬ್ರಾಹ್ಮಣ ಸಮಾವೇಶ ಪುತ್ತೂರಿನ ಶಿವ ಕೃಪಾ ಸಭಾಭವನದಲ್ಲಿ ನಡೆಯಿತು. ಶೃಂಗೇರಿ ಉಭಯ ಶ್ರೀಗಳ ಅನುಗ್ರಹದ ಸೌಂದರ್ಯ ಲಹರಿಯಿಂದ ಪ್ರಾರಂಭವಾದ ಎರಡನೆಯ ದಿನದ ಕಾರ್ಯಕ್ರಮ ಭಜನೆಯಿಂದ ಮುಂದುವರೆಯಿತು.
ಸಮಾಜದಲ್ಲಿ ಒಗ್ಗಟ್ಟು ಹಾಗೂ ಸ್ವಾಸ್ಥ್ಯದ ಬಗ್ಗೆ ವಿಚಾರಗೋಷ್ಠಿಯಲ್ಲಿ ವಿಚಾರವನ್ನು ಧರ್ಮಾಧಿಕಾರಿ ಸತ್ಯ ಶಂಕರ ಬೊಳ್ಳಾವ, ವಾಗೀಶ ಶಾಸ್ತ್ರಿ, ಕರುಣಾಕರ ಬೆಳ್ಳೆ, ಶಿವರಾವ್ ಅಜ್ಜಾವರ ಮಂಡಿಸಿದರು. ಮಂಗಳೂರು, ಕಾರ್ಕಳ, ವಿಟ್ಲ, ಕಳಸ, ಸುರತ್ಕಲ್, ಅಭಿನಯ ಸಂಘದವರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಮಧ್ಯಾಹ್ನದ ಮಹಿಳಾ ವಿಚಾರಗೋಷ್ಠಿಯಲ್ಲಿ ಸಾಮಾಜಿಕ ಬದುಕಿನಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಡಾ. ಶೋಭಿತ ಸತೀಶ್, ಸರೋಜಿನಿರಾವ್ ಈಶ್ವರ ಮಂಗಲ, ಜ್ಯೋತಿ ಪದ್ಮನಾಭ ಭಂಡಿ ಕಾರ್ಕಳ, ಶಾಂತ ಗಣೇಶ್ ರಾವ್ ಕುಂಭಾಶಿ, ಡಾ. ಸುಲೇಖ ವರದರಾಜ್ ಪುತ್ತೂರು ತಮ್ಮ ವಿಚಾರಗಳನ್ನು ಮಂಡಿಸಿದರು.
ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಮಹೇಶ್ ಕಜೆ ಮಾತನಾಡಿ ನಮ್ಮನ್ನು ನಾವೇ ತಿದ್ದಿಕೊಳ್ಳಬೇಕಾಗಿದೆ. ಎಲ್ಲಾ ಬ್ರಾಹ್ಮಣ ಸಮುದಾಯಗಳನ್ನು ಒಂದುಗೂಡಿಸಿ ಬಲಪಡಿಸಬೇಕಾಗಿದೆ. ಬ್ರಾಹ್ಮಣರು ಭಟ್ಟರು ಹಂತದಿಂದ ಆಚಾರ್ಯರ ಹಂತಕ್ಕೆ ಬೆಳೆಯಬೇಕು. ಉಪಾಸನೆಯಿಂದ ಬ್ರಹ್ಮ ಜ್ಞಾನ ತೇಜಸ್ ಅನ್ನು ಹೊಂದುವ ಅಗತ್ಯವಿದೆ. ಅಹಂಕಾರ, ಅಸೂಯೆ, ನಿಶ್ಚಲತೆಗಳನ್ನು ಬದಿಗಿಟ್ಟು ಆತ್ಮಶಕ್ತಿ, ಅಂತ ಶಕ್ತಿಗಳನ್ನು ಹೆಚ್ಚಿಸಿಕೊಂಡು ಬೆಳೆಯುವ ಹಂತಗಳನ್ನು ಚಿಂತಿಸಬೇಕು ಎಂದು ಕೇಳಿಕೊಂಡರು. ಉತ್ತಮ ಮಾತನಾಡಿ ಗೌರವವನ್ನು ಉಳಿಸಿಕೊಂಡು ಬ್ರಾಹ್ಮಣ್ಯವನ್ನು ನಿತ್ಯಾನಿಷ್ಟಾನದಲ್ಲಿ ಪೂರೈಸಿ ಬೆಳೆಯಬೇಕು ಎಂದು ಶೃಂಗೇರಿ ಮಠದ ಉಡುಪಿ ಧರ್ಮಾಧಿಕಾರಿ ವಾಗೀಶ ಶಾಸ್ತ್ರಿ ನುಡಿದರು.
ವೇದಾಧ್ಯಯನದಿಂದ ವಿದ್ಯಾಭ್ಯಾಸಕ್ಕೆ ಬದಲಾದ ನಾವು ಒಗ್ಗಟ್ಟನ್ನೇ ಮೂಲ ಮಂತ್ರವಾಗಿ ಪಠಿಸಿ ಸದೃಢರಾಗಬೇಕಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ರಘುನಾಥ ಎಸ್ ಅಭಿಪ್ರಾಯ ಪಟ್ಟರು. ಸಮಾಜದವರ ಸುಖ ಕಷ್ಟಕ್ಕೆ ಮಹಾಮಂಡಲ ಸ್ಪಂದಿಸಬೇಕೆಂದು ಧರ್ಮಸ್ಥಳ ಪಾರುಪತ್ಯಗಾರ ಲಕ್ಷ್ಮಿ ನಾರಾಯಣರಾವ್ ಸಲಹೆ ಇತ್ತರು. ಮಂಗಳೂರು ಸುಬ್ರಹ್ಮಣ್ಯ ಸಮಾದ ಅಧ್ಯಕ್ಷ ಡಾ. ಎ ಪಿ ಕೃಷ್ಣ ಸಮ್ಮೇಳನವನ್ನು ಮೂರು ದಿನಕ್ಕೆ ವಿಸ್ತರಿಸಲು ಸಲಹೆ ನೀಡಿದರು.
ಉಡುಪಿ ಮಂಜುನಾಥ ಹೆಬ್ಬಾರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.ಸ್ಥಾನಿಕ ರತ್ನ 2026 ಪ್ರಶಸ್ತಿಯನ್ನು ನಟ್ಟೋಜ ಜಗನ್ನಿವಾಸ ರಾವ್ ಅವರಿಗೆ ನೀಡಿ ಸನ್ಮಾನಿಸಲಾಯಿತು. ಭಟ್ಟ್ರುಪಾಡಿ ರಾಧಾಕೃಷ್ಣ ಭಟ್ ಸ್ವಾಗತಿಸಿದರು. ಶಿವ ಕೃಪಾ ಸಭಾಭವನದ ವ್ಯವಸ್ಥಾಪಕ, ಪುತ್ತೂರು ಸಂಘದ ನಿರ್ದೇಶಕ ಅಶೋಕ್ ಕುಮಾರ್ ವಂದಿಸಿದರು.

