ಉಡುಪಿ : ಜಿಲ್ಲೆಯ ಮಲ್ಪೆ ಡೆಲ್ಟಾ ಬೀಚ್ ಸಮೀಪದ ನದಿ–ಸಮುದ್ರ ಸಂಗಮ ಪ್ರದೇಶದಲ್ಲಿ ಸೋಮವಾರ ಪ್ರವಾಸಿ ದೋಣಿ ಮುಳುಗಿ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಲ್ಪೆ–ಕೋಟ ಪೊಲೀಸ್ ಠಾಣಾ ಗಡಿ ವ್ಯಾಪ್ತಿಯ ಹಂಗಾರಕಟ್ಟೆ ಶಿಪ್ ಬಿಲ್ಡಿಂಗ್ ಪ್ರದೇಶದ ಬಳಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಶಂಕರಪ್ಪ (22) ಹಾಗೂ ಸಿಂಧು (23) ಎಂದು ಗುರುತಿಸಲಾಗಿದ್ದು, ದೀಶಾ (26) ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧರ್ಮರಾಜ (26) ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಪ್ರಯಾಣಿಕರೆಲ್ಲರೂ ಮೈಸೂರು ಜಿಲ್ಲೆಯ ಸರಸ್ವತಿಪುರಂ ಮೂಲದವರಾಗಿದ್ದು, ಅಲ್ಲಿನ ಖಾಸಗಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ತಂಡವಾಗಿದ್ದರು ಎಂದು ತಿಳಿದುಬಂದಿದೆ.
15–20 ಪ್ರಯಾಣಿಕರ ಸಾಮರ್ಥ್ಯದ ಈ ದೋಣಿಯಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಎಲ್ಲ ಪ್ರಯಾಣಿಕರಿಗೆ ಲೈಫ್ ಜಾಕೆಟ್ ನೀಡಲಾಗಿದ್ದರೂ, ಎಲ್ಲರೂ ಅದನ್ನು ಧರಿಸಿರಲಿಲ್ಲ ಎನ್ನಲಾಗಿದೆ.

